ಲಾಸ್ ಏಂಜಲೀಸ್: ಲಾಸ್ ಏಂಜಲೀಸ್ ನಲ್ಲಿ ಕಳೆದ ಕೆಲ ದಿನಗಳಿಂದ ಸಂಭವಿಸುತ್ತಿರುವ ಕಾಳ್ಗಿಚ್ಚು ಸಾವಿರಾರು ಮಂದಿಯನ್ನು ಸಂತ್ರಸ್ತರನ್ನಾಗಿಸಿದೆ. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ತಮ್ಮ ಮನೆ ಮಠ ಕಳೆದುಕೊಂಡು ನೊಂದಿದ್ದಾರೆ. ಅವರಲ್ಲಿ ಅಮೆರಿಕದ ಖ್ಯಾತ ಈಜು ಪಟು ಗ್ಯಾರಿ ಹಾಲ್ ಜೂನಿಯರ್ ಕೂಡಾ ಸೇರಿದ್ದಾರೆ. ಲಾಸ್ ಏಂಜಲೀಸ್ ಉಂಟಾದ ಕಾಳ್ಗಚ್ಚಿನಿಂದ ಗ್ಯಾರಿ ಹಾಲ್ ತಾವು ಒಲಿಂಪಿಕ್ ನಲ್ಲಿ ಪಡೆದ 10 ಪದಕಗಳನ್ನು ಕಳೆದುಕೊಂಡಿದ್ದಾರೆ.
ಖ್ಯಾತ ಒಲಿಂಪಿಕ್ ಈಜು ಪಟು ಗ್ಯಾರಿ ಹಿಲ್ ಜೂನಿಯರ್ ಪೆಸಿಫಿಕ್ ಪ್ಯಾಲಿಸೇಡ್ಸ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ತಮಗೆ ಸೇರಿದ ಹಲವಾರು ವಸ್ತುಗಳನ್ನು ಕಳೆದುಕೊಂಡಿದ್ದಾರೆ. ಈ ಪೈಕಿ ಒಲಿಂಪಿಕ್ ಪದಕಗಳೂ ಸೇರಿವೆ.
ಈ ಕುರಿತು ಆಸ್ಟ್ರೇಲಿಯ ಮೂಲದ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಮಾಧ್ಯಮ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಗ್ಯಾರಿ ಹಿಲ್ ಜೂನಿಯರ್, ಈ ಘಟನೆಯು ಕಾಲ್ಪನಿಕ ಸಿನಿಮಾಗಿಂತಲೂ ಕೆಟ್ಟದ್ದಾಗಿದೆ ಎಂದಿದ್ದಾರೆ.
“ಈ ಘಟನೆಯು ಯಾವುದೇ ಕಾಲ್ಪನಿಕ ಚಿತ್ರಕ್ಕಿಂತಲೂ ಕೆಟ್ಟದ್ದಾಗಿದೆ. ಈ ಘಟನೆಯು ನೀವು ನೋಡಿರುವ ಯಾವುದೇ ಚಿತ್ರಗಳಿಗಿಂತ 1000 ಪಟ್ಟು ಕೆಟ್ಟದಾಗಿದೆ” ಎಂದು ಅವರು ನೀಡಿರುವ ಸಂದರ್ಶನದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಗುರುವಾರದಿಂದ ಹಬ್ಬಿರುವ ಕಾಳ್ಗಿಚ್ಚು, 100 ಮೈಲಿ ವೇಗದಲ್ಲಿ ಬೀಸುತ್ತಿರುವ ಗಾಳಿಯಿಂದ ನಗರದೆಲ್ಲೆಡೆ ವ್ಯಾಪಿಸಿದೆ. ಪಶ್ಚಿಮ ಅಮೆರಿಕದಲ್ಲಿ ಕಾಳ್ಗಿಚ್ಚು ಸಾಮಾನ್ಯ ಸಂಗತಿಯಾಗಿದೆ. ಮನುಷ್ಯ ನಿರ್ಮಿತ ಹವಾಮಾನ ಬದಲಾವಣೆಯು ಹವಾಮಾನದ ಸ್ವರೂಪದ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಡುತ್ತಿದ್ದಾರೆ.