ರ್ಯಾಪರ್ ಚಂದನ್ ಶೆಟ್ಟಿ ಇತ್ತೀಚೆಗಷ್ಟೆ ‘ಕಾಟನ್ ಕ್ಯಾಂಡಿ’ ಹೆಸರಿನ ಹಾಡು ಬಿಡುಗಡೆ ಮಾಡಿದ್ದು ಹಾಡು ಸೂಪರ್ ಹಿಟ್ ಆಗಿದೆ. ಬೇರೆ ಬೇರೆ ಸೆಲೆಬ್ರಿಟಿಗಳಿಂದ ತಮ್ಮ ಹಾಡಿಗೆ ರೀಲ್ಸ್ ಮಾಡಿಸುತ್ತಿದ್ದು ಇದೀಗ ಚಂದನ್ ಶೆಟ್ಟಿ ವಿರುದ್ಧ ಇದೀಗ ಕೃತಿ ಚೌರ್ಯ ಆರೋಪ ಕೇಳಿ ಬಂದಿದೆ. ಚಂದನ್ ಶೆಟ್ಟಿ ತಮ್ಮ ಹಳೆಯ ಹಾಡಿನ ಟ್ಯೂನ್ ಕದ್ದು, ‘ಕಾಟನ್ ಕ್ಯಾಂಡಿ’ ಹಾಡಿನಲ್ಲಿ ಬಳಸಿಕೊಂಡಿದ್ದು, ತಾವು ಚಂದನ್ ವಿರುದ್ಧ ಕಾನೂನು ಮೊರೆ ಹೋಗುವುದಾಗಿ ಹೇಳಿದ್ದಾರೆ.
ಯುವರಾಜ್ ಹೆಸರಿನ ಮತ್ತೊಬ್ಬ ರ್ಯಾಪರ್, ಚಂದನ್ ಶೆಟ್ಟಿ ವಿರುದ್ಧ ಆರೋಪ ಮಾಡಿದ್ದಾರೆ. ತಾನು ಆರು ವರ್ಷದ ಹಿಂದೆ ಬಿಡುಗಡೆ ಮಾಡಿರುವ ‘ವೈ ಬುಲ್ ಪಾರ್ಟಿ’ ಹಾಡಿನ ಮೊದಲ ಪಲ್ಲವಿ ಹಾಗೂ ಎರಡನೇ ಚರಣ ನಕಲು ಮಾಡಿ ತಮ್ಮ ಹಾಡಿನಲ್ಲಿ ಬಳಸಿಕೊಂಡಿದ್ದಾರೆ. ಚಂದನ್ ಶೆಟ್ಟಿಯೇ ಈ ಬಗ್ಗೆ ಮಾತನಾಡುತ್ತಾರೆ ಎಂದು ಕಾದಿದ್ದೆ ಆದರೆ ಅವರು ಈ ಬಗ್ಗೆ ಎಲ್ಲೂ ಮಾತನಾಡಿಲ್ಲ. ನನ್ನ ಬಳಿಯೂ ಅವರು ಈ ಬಗ್ಗೆ ಕೇಳಿಲ್ಲ. ಹಾಗಾಗಿ ಈಗ ನಾನೇ ಈ ಬಗ್ಗೆ ಮಾತನಾಡುತ್ತಿದ್ದೇನೆ. ಚಂದನ್ ಶೆಟ್ಟಿ ವಿರುದ್ಧ ನಾವು ಕಾನೂನು ಮೊರೆ ಹೋಗಲಿದ್ದೀವಿ’ ಎಂದಿದ್ದಾರೆ.
‘ಆ ಹಾಡನ್ನು ನಾನು ಬಹಳ ಕಷ್ಟಪಟ್ಟು ಮಾಡಿದ್ದೆ. ಆಗಲೇ ಹಣ ಕೂಡಿಟ್ಟು 17 ಲಕ್ಷ ರೂಪಾಯಿ ಖರ್ಚು ಮಾಡಿ ಹಾಡು ಮಾಡಿದ್ದೆ. ‘ಕಾಟನ್ ಕ್ಯಾಂಡಿ’ ಹಾಡಿನಲ್ಲಿ ನನ್ನ ಟ್ಯೂನ್ ಮಾತ್ರವೇ ಅಲ್ಲದೆ ಇನ್ನೊಬ್ಬರ ಬಿಜಿಎಂ ಅನ್ನು ಸಹ ಕದ್ದಿದ್ದಾರೆ. ಚಂದನ್ ಶೆಟ್ಟಿ ಈಗಾಗಲೇ ಬೆಳೆದಿದ್ದಾರೆ. ಆದರೆ ಅವರು ಇನ್ನೊಬ್ಬರನ್ನೂ ಬೆಳೆಯಲು ಬಿಡಬೇಕು. ಚಂದನ್ ಶೆಟ್ಟಿ ನನಗೆ ಮೊದಲಿನಿಂದಲೂ ಪರಿಚಯ. ಟ್ಯೂನ್ ಬೇಕು ಎಂದು ಕೇಳಿದ್ದರೆ ನಾನೇ ಕೊಟ್ಟುಬಿಡುತ್ತಿದ್ದೆ’ ಎಂದಿದ್ದಾರೆ.
‘ಕಾಟನ್ ಕ್ಯಾಂಡಿ’ ಸಿನಿಮಾದ ಹಾಡಿನ ಕೆಲ ಸಾಲುಗಳು, ಯುವರಾಜ್ ಅವರ ಹಳೆಯ ಹಾಡನ್ನು ಹೋಲುತ್ತಿವೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದರೆ ಚಂದನ್ ಶೆಟ್ಟಿ ಈ ಆರೋಪವನ್ನ ಅಲ್ಲಗೆಳೆದಿದ್ದಾರೆ.