ವಾಷಿಂಗ್ಟನ್: ನೀಲಿ ಚಿತ್ರ ತಾರೆ ಸ್ಟಾರ್ಮಿ ಡೆನಿಯಲ್ಸ್ ಅವರಿಗೆ ಹಣ ನೀಡಿದ ಪ್ರಕರಣದಲ್ಲಿ ದೋಷಿಯಾಗಿರುವ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಜೈಲು ಶಿಕ್ಷೆಯನ್ನು ನ್ಯಾಯಾಧೀಶರು ನಿರಾಕರಿಸಿದ್ದಾರೆ.
ಪ್ರಕರಣದಲ್ಲಿ ಟ್ರಂಪ್ ದೋಷಿ ಎಂದು ಘೋಷಿಸಿದ್ದ ಮ್ಯಾನ್ಹ್ಯಾಟನ್ ಕೋರ್ಟ್, ಶಿಕ್ಷೆಯ ಪ್ರಮಾಣವನ್ನು ಶುಕ್ರವಾರಕ್ಕೆ ಕಾಯ್ದಿರಿಸಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ತೀರ್ಪು ಪ್ರಕಟಿಸಿದ ನ್ಯಾಯಾಧೀಶರು, ಔಪಚಾರಿಕವಾಗಿ ಶಿಕ್ಷೆ ವಿಧಿಸಿದರು. ಆದರೆ ಯಾವುದೇ ಜೈಲು ಶಿಕ್ಷೆ ವಿಧಿಸದೆ ಬೇಷರತ್ತಾದ ಬಿಡುಗಡೆ ಶಿಕ್ಷೆ ವಿಧಿಸಿದರು ಎಂದು ಅಸೋಸಿಯೇಟೆಡ್ ಪ್ರೆಸ್ ವರದಿಯಲ್ಲಿ ಉಲ್ಲೇಖಿಸಿದೆ.
ಈ ನಿರ್ಧಾರವು ಟ್ರಂಪ್ ಅವರನ್ನು ಅಪರಾಧದಿಂದ ಮುಕ್ತಗೊಳಿಸುತ್ತದೆ ಮತ್ತು ಜೈಲು ಶಿಕ್ಷೆ ಅಥವಾ ದಂಡ ಇಲ್ಲದೆ ಶ್ವೇತಭವನ ಪ್ರವೇಶಿಸಲು ಅವಕಾಶ ನೀಡುತ್ತದೆ.
ಮ್ಯಾನ್ಹ್ಯಾಟನ್ ನ್ಯಾಯಾಧೀಶ ಜಾನ್ ಎಂ ಮರ್ಚಂಟ್ ಅವರು, ಅಮೆರಿಕದ ನಿಯೋಜಿತ ಅಧ್ಯಕ್ಷರು ಶ್ವೇತಭವನದಲ್ಲಿ ಮೊದಲ ಅಪರಾಧಿಯಾಗುವುದನ್ನು ತಪ್ಪಿಸಲು ಬೇಷರತ್ತಾದ ಬಿಡುಗಡೆ ಶಿಕ್ಷೆ ನೀಡಿದ್ದಾರೆ.