ವಾಷಿಂಗ್ಟನ್: ಅಮೆರಿಕದ 2ನೇ ಅತಿದೊಡ್ಡ ನಗರವಾದ ಲಾಸ್ ಏಂಜಲೀಸ್ನಲ್ಲಿ ಕಾಡ್ಗಿಚ್ಚಿನ ಕದನ ಮುಂದುವರೆದಿದೆ.ಬೆಂಕಿಯ ರೌದ್ರ ನರ್ತನಕ್ಕೆ ಸುಮಾರು 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇದೀಗ ನಟಿ ಪ್ರಿಯಾಂಕ ಚೋಪ್ರಾ ತಾವಿರುವ ಮನೆಯ ಬಾಲ್ಕನಿಯಿಂದ ವಿಡಿಯೋ ಶೂಟ್ ಮಾಡಿದ್ದು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟಿ ಪ್ರಿಯಾಂಕಾ ಸದ್ಯ ಹಾಲಿವುಡ್ ನಲ್ಲಿ ಸೆಟಲ್ ಆಗಿದ್ದು ಪತಿ ಹಾಗೂ ಮಗಳೊಂದಿಗೆ ಲಾಸ್ ಏಂಜಲೀಸ್ನಲ್ಲಿ ನೆಲೆಸಿದ್ದಾರೆ. ಪ್ರಿಯಾಂಕ ವಾಸವಿರುವ ಮನೆಯ ಸ್ವಲ್ಪ ದೂರದಲ್ಲಿರುವ ಸ್ಥಳದಲ್ಲಿ ಈ ಅವಘಡ ನಡೆದಿದೆ. ಮನೆಯ ಬಾಲ್ಕನಿಯಿಂದ ಶೂಟ್ ಮಾಡಿದ ವಿಡಿಯೋ ಶೇರ್ ಮಾಡಿ, ಈ ಅನಾಹುತದಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಸಂತಾಪಗಳು. ನಾವೆಲ್ಲರೂ ಈ ರಾತ್ರಿ ಸೇಫ್ ಆಗಿರ್ತೀವೆಂದು ಭಾವಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ನಟಿ ಶೇರ್ ಮಾಡಿದ ಮತ್ತೊಂದು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ, ಲಾಸ್ ಏಂಜಲೀಸ್ ಕಾಡ್ಗಿಚ್ಚಿನ ಸಂದಿಗ್ಧ ಪರಿಸ್ಥಿತಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ ನಮ್ಮ ರಕ್ಷಕರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಲಾಸ್ ಏಂಜಲೀಸ್ನಲ್ಲಿ ಸಂಭವಿಸಿದ್ದ ಕಾಡ್ಗಿಚ್ಚಿಗೆ ಸಾವಿರಾರು ಮನೆಗಳು ಸುಟ್ಟು ಭಸ್ಮವಾಗಿದೆ, ಇದುವರೆಗೆ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಮನೆಗಳು, ವ್ಯಾಪಾರ ಮಳಿಗೆಗಳು ಎಲ್ಲವೂ ಸುಟ್ಟು ಕರಕಲಾಗಿವೆ. ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ಹೊತ್ತಿಕೊಂಡಿರುವ ಭೀಕರ ಕಾಡ್ಗಿಚ್ಚು ಅಪಾರ ಹಾನಿಯುಂಟುಮಾಡಿದೆ. ಮುಗಿಲೆತ್ತರಕ್ಕೆ ಚಿಮ್ಮುತ್ತಿರುವ ಜ್ವಾಲೆ ನೆರೆಯ ಪ್ರದೇಶಗಳಿಗೂ ವ್ಯಾಪಿಸುತ್ತಿದೆ. ಸುತ್ತಲಿನ ಹಾಲಿವುಡ್ ಪ್ರದೇಶದಿಂದ ಜನರನ್ನು ಸ್ಥಳಾಂತರಿಸುವ ಕಾರ್ಯಕ್ಕೆ ರಕ್ಷಣಾ ಸಿಬ್ಬಂದಿ ಚಾಲನೆ ನೀಡಿದ್ದಾರೆ. ಈ ನಡುವೆ 1,00,000 ಜನರ ಸ್ಥಳಾಂತರಕ್ಕೆ ಆದೇಶಿಸಲಾಗಿದೆ. ಸುಮಾರು 2,000 ಮನೆಗಳು ಸುಟ್ಟು ಭಸ್ಮವಾಗಿವೆ.