ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಿಗೆ ನ್ಯಾಯಾಲಯ ರೆಗ್ಯೂಲರ್ ಬೇಲ್ ನೀಡಿದೆ. ರೆಗ್ಯೂಲರ್ ಬೇಲ್ ಪಡೆದ ಬಳಿಕ ಮೊದಲ ಬಾರಿಗೆ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಉಳಿದ ಆರೋಪಿಗಳು ನಿನ್ನೆ ಬೆಂಗಳೂರಿನ ಸಿಸಿಎಚ್ 57 ಕೋರ್ಟ್ಗೆ ಹಾಜರಾಗಿದ್ದರು. ಎಲ್ಲ ಆರೋಪಿಗಳ ಹಾಜರಿ ಪಡೆದ ನ್ಯಾಯಾಧೀಶರು ಆ ನಂತರ ಪ್ರಕರಣವನ್ನು ಫೆಬ್ರವರಿ 25ಕ್ಕೆ ಮುಂದೂಡಿದರು. ಈ ನಡುವೆ ನಟ ದರ್ಶನ್ ಮತ್ತು ಪವಿತ್ರಾ ಗೌಡ ಅವರುಗಳು ಪ್ರತ್ಯೇಕವಾಗಿ ನ್ಯಾಯಾಧೀಶರ ಬಳಿ ಬೆಂಗಳೂರು ಬಿಟ್ಟು ಹೊರಗೆ ಪ್ರಯಾಣಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದರು.
ನಟ ದರ್ಶನ್, ಮೈಸೂರಿಗೆ ತೆರಳಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದರು. ಅದರಂತೆ ನಟಿ ಪವಿತ್ರಾ ಗೌಡ ಕರ್ನಾಟಕ ಬಿಟ್ಟು ಹೊರರಾಜ್ಯಕ್ಕೆ ತೆರಳಲು ಅನುಮತಿ ಕೋರಿದ್ದರು. ಇಬ್ಬರಿಗೂ ನ್ಯಾಯಾಲಯ ಅನುಮತಿ ನೀಡಿದೆ. ದರ್ಶನ್, ಐದು ದಿನಗಳ ಕಾಲ ಮೈಸೂರಿಗೆ ತೆರಳಬಹುದಾಗಿದೆ. ಜನವರಿ 12 ರಿಂದ 17ರವರೆಗೆ ದರ್ಶನ್ ಮೈಸೂರಿನಲ್ಲಿ ಇರಬಹುದಾಗಿದ್ದು ಆ ಬಳಿಕ ಬೆಂಗಳೂರಿಗೆ ವಾಪಸ್ ಬರಬೇಕು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಇನ್ನು ಪವಿತ್ರಾ ಗೌಡ, ತಾವು ದೇವಾಲಯಕ್ಕೆ ತೆರಳಲು ಹಾಗೂ ತಮ್ಮ ವಸ್ತ್ರವಿನ್ಯಾಸದ ಬುಟಿಕ್ಗಾಗಿ ಕೆಲ ವಸ್ತುಗಳನ್ನು ಖರೀದಿ ಮಾಡಲು ವ್ಯಾವಹಾರಿಕ ಕಾರಣಗಳಿಗಾಗಿ ಹೊರ ರಾಜ್ಯಗಳಿಗೆ ತೆರಳಲು ಅನುಮತಿ ನೀಡಬೇಕೆಂದು ಮನವಿ ಮಾಡಿದ್ದರು. ಅದರಂತೆ ನ್ಯಾಯಾಧೀಶರು ಪವಿತ್ರಾ ಗೌಡಗೆ ಸಹ ಅನುಮತಿ ನೀಡಿದ್ದಾರೆ.
ದರ್ಶನ್, ‘ಡೆವಿಲ್’ ಸಿನಿಮಾದ ಚಿತ್ರೀಕರಣ ಶುರು ಮಾಡುವ ಆಲೋಚನೆಯಲ್ಲಿದ್ದು, ಇದೇ ಕಾರಣಕ್ಕೆ ಮೈಸೂರಿಗೆ ತೆರಳಲು ಅನುಮತಿ ಕೋರಿದ್ದರು ಎನ್ನಲಾಗುತ್ತಿದೆ. ಆದರೆ ನ್ಯಾಯಾಲಯವು ಕೇವಲ ಐದು ದಿನಗಳ ಕಾಲವಷ್ಟೆ ಮೈಸೂರಿಗೆ ಹೋಗಲು ಅನುಮತಿ ನೀಡಿದೆ. ಹೀಗಾಗಿ ದರ್ಶನ್ ಶೂಟಿಂಗ್ ನಲ್ಲಿ ಭಾಗಿಯಾಗ್ತಾರಾ ಎಂಬ ಪ್ರಶ್ನೆ ಎದುರಾಗಿದೆ.