ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕ ಪಿ. ಜಯಚಂದ್ರನ್ ಅವರು ನಿಧನರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಜಯಚಂದ್ರನ್ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದು ಅವರಿಗೆ 80 ವರ್ಷ ವಯಸ್ಸಾಗಿತ್ತು. ಜಯಚಂದ್ರನ್ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ.
ಕಳೆದ ವರ್ಷ ಪಿ. ಜಯಚಂದ್ರನ್ ಅವರ ಅನಾರೋಗ್ಯದ ಬಗ್ಗೆ ವದಂತಿ ಹಬ್ಬಿತ್ತು. ಆದರೆ ಆಗ ಕುಟುಂಬದವರು ಸುದ್ದಿಯನ್ನು ತಳ್ಳಿಹಾಕಿದ್ದರು. ಆದರೆ ಇದೀಗ ಪಿ. ಜಯಚಂದ್ರನ್ ನಿಧನರಾಗಿದ್ದು ಹಲವರು ಸಂತಾಪ ಸೂಚಿಸಿದ್ದಾರೆ. ತಮ್ಮ ವೃತ್ತಿ ಬದುಕಿನಲ್ಲಿ ಅಂದಾಜು 16 ಸಾವಿರಕ್ಕೂ ಅಧಿಕ ಗೀತೆಗಳನ್ನು ಪಿ. ಜಯಚಂದ್ರನ್ ಅವರು ಹಾಡಿದ್ದು ಈ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದರು.
ಇಳಯರಾಜ, ಎ.ಆರ್. ರೆಹಮಾನ್, ಎಂಎಂ ಕೀರವಾಣಿ, ವಿಜಯ ಭಾಸ್ಕರ್, ಎಂ. ರಂಗ ರಾವ್ ಮುಂತಾದ ಲೆಜೆಂಡರಿ ಸಂಗೀತ ನಿರ್ದೇಶಕರ ಜೊತೆಗೆ ಪಿ. ಜಯಚಂದ್ರನ್ ಅವರು ಕೆಲಸ ಮಾಡಿದ್ದರು. ಮಲಯಾಳಂ, ಕನ್ನಡ, ಹಿಂದಿ, ತೆಲುಗು, ತಮಿಳು ಮುಂತಾದ ಭಾಷೆಗಳ ಸಿನಿಮಾ ಗೀತೆಗಳಿಗೆ ಅವರು ಧ್ವನಿಯಾಗಿದ್ದರು.
ಕನ್ನಡದಲ್ಲೂ ಜಯಚಂದ್ರನ್ ಹಲವು ಹಾಡುಗಳಿಗೆ ಧ್ವನಿಯಾಗಿದ್ದರು. ‘ಅಮೃತ ಗಳಿಗೆ’ ಸಿನಿಮಾದ ‘ಹಿಂದೂಸ್ಥಾನವು ಎಂದೂ ಮರೆಯದ..’, ಒಲವಿನ ಉಡುಗೊರೆ ಚಿತ್ರದ ‘ಒಲವಿನ ಉಡುಗೊರೆ ಕೊಡಲೇನು..’, ‘ರಂಗನಾಯಕಿ’ ಸಿನಿಮಾದ ‘ಮಂದಾರ ಪುಷ್ಪವು ನೀನು..’, ‘ಮಾನಸ ಸರೋವರ’ ಸಿನಿಮಾದ ‘ಚಂದ ಚಂದ..’, ‘ಕಿಲಾಡಿಗಳು’ ಚಿತ್ರ ‘ಕಾಲ ಮತ್ತೊಮ್ಮೆ ನಮಗಾಗಿ ಬಂತು..’ ಸೇರಿದಂತೆ ಅನೇಕ ಗೀತೆಗಳನ್ನು ಜಯಚಂದ್ರನ್ ಅವರು ಹಾಡಿದ್ದರು.