ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ನೂತನ ಅಧ್ಯಕ್ಷ ಮತ್ತು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯನ್ನಾಗಿ ವಿ ನಾರಾಯಣನ್ ಅವರನ್ನು ಕೇಂದ್ರ ಸರ್ಕಾರ ನೇಮಿಸಿ ಆದೇಶ ಹೊರಡಿಸಿದೆ.
ಎಸ್ ಸೋಮನಾಥ್ ಅವರ ಅಧಿಕಾರಾವಧಿ ಮುಗಿದ ಬಳಿಕ ವಿ ನಾರಾಯಣನ್ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಕೇಂದ್ರ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ. ಸದ್ಯ ವಿ ನಾರಾಯಣನ್ ಅವರು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸಂಪುಟದ ನೇಮಕಾತಿ ಸಮಿತಿಯ ಆದೇಶದ ಪ್ರಕಾರ, ಪ್ರಸ್ತುತ ಇಸ್ರೋ ಮುಖ್ಯಸ್ಥರಾಗಿರುವ ಎಸ್ ಸೋಮನಾಥ್ ಅವರಿಂದ ವಿ ನಾರಾಯಣನ್ ಅವರು ಜನವರಿ 14 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕ್ಯಾಬಿನೆಟ್ ನೇಮಕಾತಿ ಸಮಿತಿಯು ಜನವರಿ 7, 2025 ರಂದು ಹೊರಡಿಸಿದ ಅಧಿಕೃತ ಆದೇಶದ ಪ್ರಕಾರ, ವಿ ನಾರಾಯಣನ್ ಅವರು ಎರಡು ವರ್ಷಗಳ ಅವಧಿಗೆ ಇಸ್ರೋ ಮುಖ್ಯಸ್ಥರಾಗಿ ಸೇವೆ ಸಲ್ಲಿಸಲಿದ್ದಾರೆ.