ಬ್ಯಾಂಕ್ ಆಫ್ ಮಹಾರಾಷ್ಟ್ರದ ಜೌಲ್ಖೇಡಾ ಶಾಖೆಯಲ್ಲಿ 1.25 ಕೋಟಿ ರೂ.ಗಳ ದೊಡ್ಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳಿಕ ಟೀಮ್ ಇಂಡಿಯಾದ ಮಾಜಿ ಆಟಗಾರ ನಮನ್ ಓಜಾ ತಂದೆ ವಿನಯ್ ಓಜಾ ಸೇರಿದಂತೆ ನಾಲ್ವರಿಗೆ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ. 2013 ರಲ್ಲಿ ವಿನಯ್ ಓಜಾ ಸೇರಿದಂತೆ ನಾಲ್ವರು ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 1.25 ಕೋಟಿ ರೂ. ವಂಚಿಸಿದ್ದರು. ಈ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ 11 ವರ್ಷಗಳ ಬಳಿಕ ನ್ಯಾಯಾಲಯ ತೀರ್ಪು ನೀಡಿದೆ.
ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 20 ಲಕ್ಷ ರೂವರೆಗೂ ಸಾಲ! ಕೇಂದ್ರ ಸರ್ಕಾರದ ಈ ಯೋಜನೆಯಿಂದ ಸಿಗುತ್ತೆ ಭರ್ಜರಿ ಲಾಭ!
ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾಗಿದೆ. ಅದರಂತೆ ಮುಲ್ತಾಯಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ವಿನಯ್ ಓಜಾ ಸೇರಿದಂತೆ ಮೂವರಿಗೆ 7 ವರ್ಷಗಳ ಜೈಲು ಶಿಕ್ಷೆ, 14 ಲಕ್ಷ ರೂ. ದಂಡ ಹಾಗೂ ಹಗರಣದ ಮಾಸ್ಟರ್ ಮೈಂಡ್ ಅಭಿಷೇಕ್ ರತ್ನಂಗೆ 10 ವರ್ಷ ಜೈಲು ಮತ್ತು 80 ಲಕ್ಷ ರೂ. ದಂಡ ವಿಧಿಸಿದೆ.
ಏನಿದು ಪ್ರಕರಣ?
2013 ರಲ್ಲಿ, ಬೇತುಲ್ನ ಮುಲ್ತಾಯಿ ಪೊಲೀಸ್ ಠಾಣೆ ವ್ಯಾಪ್ತಿಯ ಬ್ಯಾಂಕ್ ಆಫ್ ಮಹಾರಾಷ್ಟ್ರದ ಜೌಲ್ಖೇಡಾ ಶಾಖೆಯಲ್ಲಿ 1.25 ಕೋಟಿ ರೂ.ಗಳ ದೊಡ್ಡ ವಂಚನೆ ಪತ್ತೆಯಾಗಿತ್ತು. ಈ ವಂಚನೆಯಲ್ಲಿ ಆರು ಮಂದಿ ಭಾಗಿಯಾಗಿದ್ದರು. ಅಂದು ಇದೇ ಬ್ಯಾಂಕ್ನಲ್ಲಿ ನಮನ್ ಓಜಾ ಅವರ ತಂದೆ ವಿನಯ್ ಓಜಾ ಅವರು ಸಹಾಯಕ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಇವರೆಲ್ಲರೂ ಸೇರಿ ಬ್ಯಾಂಕ್ ಅಧಿಕಾರಿಗಳ ಪಾಸ್ವರ್ಡ್ಗಳ ಮೂಲಕ ಅವ್ಯವಹಾರ ನಡೆಸಿದ್ದರು. ಅಭಿಷೇಕ್ ರತ್ನಂ ಈ ಎಲ್ಲಾ ರುಜುವಾತುಗಳನ್ನು ಬಳಸಿಕೊಂಡು ಅನೇಕ ನಕಲಿ ಖಾತೆಗಳನ್ನು ತೆರೆದು, ಕೋಟಿ ರೂ.ಗಳನ್ನು ವಂಚಿಸಿದ್ದರು.ಈ ಅವ್ಯವಹಾರವು ಬೆಳಕಿಗೆ ಬರುತ್ತಿದ್ದಂತೆ ಅಭಿಷೇಕ್ ರತ್ನಂ ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. ಹಾಗೆಯೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ನಮನ್ ಓಜಾ ಅವರ ತಂದೆಯು 2022 ರಲ್ಲಿ ಬಂಧನಕ್ಕೊಳಗಾಗಿದ್ದರು.
ಇದೀಗ ಈ ಪ್ರಕರಣದಲ್ಲಿ ನಾಲ್ವರು ತಪ್ಪಿತಸ್ಥರೆಂದು ದೃಢವಾಗಿದೆ. ಹೀಗಾಗಿ ಮುಲ್ತಾಯಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಅಭಿಷೇಕ್ ರತ್ನಂ ಅವರಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ವಿನಯ್ ಓಜಾ ಸೇರಿದಂತೆ ಮೂವರಿಗೆ 7 ವರ್ಷಗಳ ಶಿಕ್ಷೆ ವಿಧಿಸಿದೆ.