ನಟ ಶಿವರಾಜ್ ಕುಮಾರ್ ಅಮೆರಿಕಾದ ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಡಿಸೆಂಬರ್ 24ರಂದು ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು ಈ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಇದೆಲ್ಲದರ ಜೊತೆಗೆ ಅವರ ಆರೋಗ್ಯದ ಬಗ್ಗೆಯೂ ಅಪ್ಡೇಟ್ ನೀಡಿದ್ದಾರೆ.
ಶಿವರಾಜ್ಕುಮಾರ್ ಅವರು ಮೊದಲು ಕ್ಯಾನ್ಸರ್ ಇರುವ ವಿಚಾರವನ್ನು ರಿವೀಲ್ ಮಾಡಲಾಗಿರಲಿಲ್ಲ. ಅನಾರೋಗ್ಯ ಎಂದಷ್ಟೇ ಅವರು ಹೇಳಿದ್ದರು. ಅಮೆರಿಕಕ್ಕೆ ತೆರಳುವುದಕ್ಕೂ ಮೊದಲು ಅವರು ಈ ಬಗ್ಗೆ ಮಾಹಿತಿ ನೀಡಿದರು. ತಮಗೆ ಕ್ಯಾನ್ಸರ್ ಇರುವ ವಿಚಾರವನ್ನು ಅವರು ಒಪ್ಪಿಕೊಂಡರು. ಶಿವರಾಜ್ಕುಮಾರ್ ಅವರಿಗೆ ಮೂತ್ರಪಿಂಡದ ಕ್ಯಾನ್ಸರ್ ಇತ್ತು ಎಂಬುದು ನಂತರ ರಿವೀಲ್ ಆಯಿತು.
‘ಸದ್ಯ ಕ್ಯಾನ್ಸರ್ ತಗುಲಿದ ಮೂತ್ರ ಪಿಂಡವನ್ನ ತೆಗೆದು ಹಾಕಲಾಗಿದೆ. ಶಸ್ತ್ರಚಿಕಿತ್ಸೆ ನಂತರ ಕರುಳನ್ನು ಬಳಸಿ ಕೃತಕ ಮೂತ್ರ ಪಿಂಡವನ್ನ ಅಳವಡಿಸಲಾಗಿದೆ. ಶಿವರಾಜ್ಕುಮಾರ್ ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಾಗಿದ್ದಾರೆ’ ಎಂದು ವೈದ್ಯರು ತಿಳಿಸಿದ್ದಾರೆ.
ಶಿವಣ್ಣನ ಆರೋಗ್ಯದ ಬಗ್ಗೆ ಗೀತಕ್ಕ ಕೂಡ ಮಾಹಿತಿ ನೀಡಿದ್ದಾರೆ. ‘ಅಭಿಮಾನಿಗಳು ಹೇಗೆ ದೇವರೋ ಹಾಗೆ ಡಾಕ್ಟರ್ ಕೂಡ ದೇವರ ರೀತಿ ಬಂದಿದ್ದಾರೆ. ಸದ್ಯ ಶಿವರಾಜ್ಕುಮಾರ್ ಐಸಿಯುನಲ್ಲಿದ್ದಾರೆ. ಎಲ್ಲವೂ ಯಶಸ್ವಿಯಾಗಿದೆ. ಸದ್ಯದಲ್ಲಿಯೇ ಶಿವರಾಜ್ಕುಮಾರ್ ನಿಮ್ಮ ಬಳಿ ಮಾತನಾಡುತ್ತಾರೆ’ ಎಂದು ಗೀತಾ ಅವರು ಮಾಹಿತಿ ನೀಡಿದ್ದಾರೆ.
‘ಶಿವರಾಜ್ಕುಮಾರ್ ಅವರ ಇತ್ತೀಚಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಅವರು ಈಗ ಸ್ಥಿರ ಪರಿಸ್ಥಿತಿಯಲ್ಲಿ ಇದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಈ ಶಸ್ತ್ರಚಿಕಿತ್ಸೆಯನ್ನು ಡಾ. ಮುರುಗೇಶ್ ಮನೋಹರನ್ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನೆರವೇರಿಸಲಾಗಿದೆ. ಶಸ್ತ್ರಚಿಕಿತ್ಸೆಯ ವೇಳೆ ಮತ್ತು ಶಸ್ತ್ರಚಿಕಿತ್ಸೆ ನಂತರದ ಆರೈಕೆ ಸಮಯದಲ್ಲಿ ಡಾ. ಶಿವರಾಜ್ಕುಮಾರ್ ಅವರ ಆರೋಗ್ಯ ಸ್ಥಿತಿಯು ಸ್ಥಿರವಾಗಿದೆ’ ಎಂದು ಪ್ರೆಸ್ನೋಟ್ನಲ್ಲಿ ತಿಳಿಸಲಾಗಿದೆ.
‘ಶಿವರಾಜ್ಕುಮಾರ್ ಪ್ರಸ್ತುತ ತೀವ್ರ ನಿರೀಕ್ಷಣೆಯಲ್ಲಿದ್ದಾರೆ. ಪರಿಣಿತ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ತಂಡದಿಂದ ಅತ್ಯುತ್ತಮ ಆರೈಕೆ ಪಡೆಯುತ್ತಿದ್ದಾರೆ. ಶಿವರಾಜ್ಕುಮಾರ್ ಅವರ ಅಭಿಮಾನಿಗಳು, ಸಹೋದ್ಯೋಗಿಗಳು, ಶುಭಚಿಂತಕರು ಮತ್ತು ಮಾಧ್ಯಮಗಳು ಈ ಸಂದರ್ಭದಲ್ಲಿ ತೋರಿಸಿದ ನಿರಂತರ ಬೆಂಬಲ, ಪ್ರಾರ್ಥನೆ ಮತ್ತು ಮೆಚ್ಚುಗೆ ಸಂದೇಶಗಳಿಗೆ ಹೃತ್ತೂರ್ವಕ ಧನ್ಯವಾದಗಳನ್ನು ತಿಳಿಸುತ್ತೇವೆ. ನಿಮ್ಮ ಪ್ರೋತ್ಸಾಹವು ಡಾ. ಶಿವರಾಜ್ಕುಮಾರ್ ಮತ್ತು ಅವರ ಕುಟುಂಬಕ್ಕೆ ದೊಡ್ಡ ಶಕ್ತಿ ಒದಗಿಸಿದೆ. ಅವರ ಚೇತರಿಕೆ ಕುರಿತು ಮುಂದಿನ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ಹಂಚಿಕೊಳ್ಳಲಾಗುವುದು’ ಎಂದು ಪ್ರೆಸ್ನೋಟ್ನಲ್ಲಿ ತಿಳಿಸಲಾಗಿದೆ.