ಆ ಗ್ರಾಮದ ಕೆರೆಯಲ್ಲಿ ಬರೀ ನೀರು ತುಂಬಿಕೊಂಡಿಲ್ಲ. ಬದಲಾಗಿ ಆಕಾಶದೆತ್ತರಕ್ಕೆ ಹಾರಾಡೋ ಬಾನಾಡಿಗಳ ಲೋಕವನ್ನೇ ತನ್ನ ಮಡಿಲಿಗೆ ಹಾಕಿಕೊಂಡಿದೆ. ಸಹಸ್ರಾರು ವಲಸೆ ಪಕ್ಷಿಗಳಿಗೆ ತೂಗೋ ತೊಟ್ಟಿಲಾಗೋ ಮೂಲಕ ಸ್ವದೇಶವಲ್ಲದೇ ವಿದೇಶಿ ಪಕ್ಷಿಗಳ ಆಶ್ರಯ ತಾಣವಾಗಿದೆ. ಅಂತಹ ಸೌಂದರ್ಯದ ತಾಣವನ್ನು ನೋಡಲು ಪ್ರವಾಸಿಗರ ದಂಡೇ ಹರಿದು ಬರ್ತಾ ಇದ್ದು ಅಪರೂಪದ ವಿದೇಶಿ ಪಕ್ಷಿಗಳನ್ನು ನೋಡೋದಕ್ಕೆ ಎರಡು ಕಣ್ಣು ಸಾಲದಾಗಿದೆ. ನೀವೂ ಕೂಡಾ ಬನ್ನಿ ಭೂಲೋಕದ ಈ ಬಾನಾಡಿಗಳ ತಾಣವನ್ನೊಮ್ಮೆ ನೋಡ್ಕೊಂಡು ಬರೋಣ..
ಹೌದು ಈ ಎಲ್ಲಾ ದೃಶ್ಯಗಳು ಕಂಡುಬರೋದು ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದ ಕೆರೆಯಲ್ಲಿ. ನೇಸರನ ಆಗಮನದ ಬೆನ್ನಲ್ಲೇ ವಿಶಾಲ ಕೆರೆಯ ಸುತ್ತ ಮುತ್ತ ವಿದೇಶಿ ಹಕ್ಕಿಗಳ ಕಲರವ ಸಂಭ್ರಮ ಹೇಳತೀರದು. ಬೆಳಿಗ್ಗೆಯಿಂದ ಸಂಜೆಯವರೆಗೂ ಈ ವಲಸೆ ಪಕ್ಷಿಗಳ ಸಾಮ್ರಾಜ್ಯ ಎಂಥವರನ್ನೂ ಬೆರಗು ಮೂಡಿಸತ್ತೆ. ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದಲ್ಲಿ ವಿಶಾಲವಾದ ಕೆರೆಯಿದೆ.
ಗದಗದಿಂದ ಲಕ್ಷ್ಮೇಶ್ವರ ಹೋಗೋ ಮಾರ್ಗ ಮಧ್ಯೆ ಗದಗದಿಂದ 24ಕಿಲೋ ಮೀಟರ್, ಲಕ್ಷ್ಮೇಶ್ವರದಿಂದ 12 ಕಿಲೋ ಮೀಟರ್ ಅಂತರದಲ್ಲಿದೆ. 138 ಎಕರೆ ವಿಸ್ತೀರ್ಣದ ವಿಸ್ತಾರದ ಈ ಕೆರೆಗೆ ಸುಮಾರು 35-40 ವರ್ಷಗಳಿಂದ ಮಂಗೋಲಿಯಾ, ಆಸ್ಟ್ರೇಲಿಯಾ, ಜಪಾನ್, ಪಾಕಿಸ್ತಾನ, ಚೀನಾ, ಟಿಬೇಟ್ ದೇಶ ಸೇರಿದಂತೆ ಲಡಾಖ ನಿಂದ ಸಹಸ್ರಾರು ಪಕ್ಷಿಗಳು ಬರುತ್ತಿವೆ. ಇವುಗಳ ಕಲರವ ಪ್ರತಿವರ್ಷ ಕೆರೆಗೆ ರಂಗು ತರ್ತಾಯಿದೆ. ಜೊತೆಗೆ ಈ ಪಕ್ಷಿಗಳು ನೋಡುಗರನ್ನು ಕೈಬೀಸಿ ಕರೆಯುತ್ತಿದೆ. ಬಾತು ಕೋಳಿಗಿಂತ ದೊಡ್ಡ ಗಾತ್ರದಲ್ಲಿರೋ ಇವು ಬಾರ್ ಹಡೆಡ್ ಗೂಸ್,
Merry Christmas 2024: ಕ್ರಿಸ್ಮಸ್ ಹಬ್ಬದ ಇತಿಹಾಸ ತಿಳಿದಿದೆಯಾ..? ಯೇಸು ಕ್ರಿಸ್ತನ ಜನನದ ಬಗ್ಗೆ ಇಲ್ಲಿದೆ ಮಾಹಿತಿ
ಬ್ರಾಮಿಣಿ ಡಕ್, ಬ್ಲಾಕ್ ಐಬಿಸ್, ಇಟಲ್ ಗಿಬ್ಸ್, ರೆಡ್ ಥಾರ್ಟ್, ಪಾಂಟೆಡ್ ಸ್ಪಾರ್ಕ್ ಬರ್ಡ್ಸ್ ಸೇರಿದಂತೆ ಅನೇಕ ಜಾತಿಯ ಪಕ್ಷಿಗಳು ಈ ಕೆರೆಗೆ ಬರುತ್ತವೆ. ಸದ್ಯ 6 ಸಾವಿರಕ್ಕೂ ಅಧಿಕ ಪಕ್ಷಿಗಳು ಇಲ್ಲಿದ್ದು ನವೆಂಬರ್ ನಿಂದ ಎಪ್ರಿಲ್ ವರೆಗೆ ಇಲ್ಲಿ ಇರುತ್ತವೆ. ದಿನ ಕಳೆದಂತೆ ಪಕ್ಷಿಗಳ ಸಂಖ್ಯೆ ಕೂಡಾ ಹೆಚ್ಚಾಗತ್ತೆ. ಕಳೆದ ಎರಡ್ಮೂರು ವರ್ಷಗಳಿಂದ ಮಾಗಡಿ ಕೆರೆಯಲ್ಲಿ ನೀರು ನಾಯಿಗಳೂ…! ಸಹ ಕಾಣಿಸ್ತಾ ಇದ್ದು ನೀರಿನಲ್ಲಿ ಮುಳುಗಿ ಏಳ್ತಾ,
ಅತ್ತಿಂದಿತ್ತ ಓಡಾಡಾಡ್ತಿವೆ. ಮಾಗಡಿ ಕೆರೆ ಜೊತೆಗೆ ಸಮೀಪದ ಶೆಟ್ಟಿಕೆರೆಗೂ ಪಕ್ಷಿಗಳು ವಲಸೆ ಬರುತ್ತಿವೆ. ಪಕ್ಷಿಗಳ ಈಜು, ಕಲರವ ಒಂದಕ್ಕಿಂತ ಒಂದು ಭಿನ್ನವಾದ ಪಕ್ಷಿಗಳ ನೋಟ ಎಲ್ಲರನ್ನು ಕೆರೆಯತ್ತ ಸೆಳೆಯುತ್ತಿದೆ. ಪಕ್ಷಿಗಳನ್ನು ನೋಡಲು ರಾಜ್ಯ, ಹೊರ ರಾಜ್ಯ ಸೇರಿದಂತೆ ನಾನಾ ಭಾಗಗಳಿಂದ ಪಕ್ಷಿಪ್ರೀಯರು ಆಗಮಿಸ್ತಾರೆ. ಪಕ್ಷಿಗಳು ಇಲ್ಲಿಗೆ ಬರೋದು ಹೆಮ್ಮೆಯ ವಿಷಯ ಜೊತೆಗೆ ವಿದೇಶಿ ಪಕ್ಷಿಗಳು ಸ್ವದೇಶದಲ್ಲಿ ನೋಡಲು ಸಿಗುತ್ತಿರುವ ಬಗ್ಗೆ ಸಂತಸ ಕೂಡಾ ಇದೆ ಅಂತಿದ್ದಾರೆ ಪಕ್ಷಿಪ್ರಿಯರು.
ಬೆಳಿಗ್ಗೆ ಸೂರ್ಯ ಉದಯಿಸುವ ವೇಳೆಗೆ ಈ ಪಕ್ಷಿಗಳು ಆಹಾರ ಆರಸಿಕೊಂಡ ಕೆರಯಿಂದ ಹಾರಿ ಹೋಗುತ್ತವೆ. ನೂರಾರು ಕಿಮೀ ದೂರ ಹೋಗುವ ಪಕ್ಷಿಗಳು ರೈತರ ಹೊಲದಲ್ಲಿ ಬೆಳೆದ ಬೆಳೆಗಳನ್ನು ತಿಂದು ಮೂರು ಘಂಟೆಯಲ್ಲಿ ಮತ್ತೆ ಕೆರೆಗೆ ಬಂದು ಠಿಕಾಣಿ ಹೂಡುತ್ತವೆ. ಮತ್ತೆ ಸಂಜೆ ಸೂರ್ಯ ಮರೆಯಾಗುವ ಮುನ್ನ ಮತ್ತೊಮ್ಮೆ ಅಹಾರ ಅರಸಿ ಹೋಗಿ ಕಾಳು ಕಡಿ ತಿಂದು ಬರುತ್ತವೆ. ಹೀಗೇ ಅಹಾರ ಆರಿಸಿಕೊಂಡು ಗುಂಪು ಗುಂಪಾಗಿ ಹಾರಿ ಹೋಗುವ ಹಕ್ಕಿಗಳನ್ನು ನೋಡೋದೇ ಕಣ್ಣಿಗೆ ಹಬ್ಬ.
ಹಕ್ಕಿಗಳು ಆಗಸದಲ್ಲಿ ಹಾರೋವಾಗ ಬಾನಿನಲ್ಲಿ ರಂಗವಲ್ಲಿ ಬಿಡಿಸಿದ ರೀತಿ ಕಾಣುತ್ತದೆ. ಕಳೆದ ಹಲವಾರು ವರ್ಷಗಳಿಂದ ವಿದೇಶಿ ಅತಿಥಿಗಳು ಈ ಕೆರೆಗೆ ಬರ್ತಾ ಇದ್ದು ಈ ಪಕ್ಷಿಗಳಿಂದಲೇ ಮಾಗಡಿ ಕೆರೆ ಪ್ರಸಿದ್ದಿಯಾಗಿದೆ. ಒಟ್ಟಿನಲ್ಲಿ ನವೆಂಬರ್ ತಿಂಗಳ ಕೊನೆಯ ವಾರದಿಂದ ಕೆರೆಗೆ ಆಗಮಿಸುವ ಈ ಪಕ್ಷಿಗಳು ಎಪ್ರೀಲ್ ವೇಳೆಗೆ ತಮ್ಮ ದೇಶದತ್ತ ಕಾಲು ಕೀಳುತ್ತವೆ. ಮಾಗಡಿ ಕೆರೆ ಹಾಗೂ ಶೆಟ್ಟಿಕೆರೆ ವಿದೇಶಿ ಪಕ್ಷಿಗಳಿಗೆ ಅಚ್ಚುಮೆಚ್ಚಿನ ತಾಣವಾಗಿದೆ. ಆದ್ರೆ ಇದನ್ನೊಂದು ಪ್ರಸಿದ್ಧ ಪಕ್ಷಿಧಾಮವನ್ನಾಗಿ ಅಭಿವೃದ್ದಿಗೊಳಿಸುವಲ್ಲಿ ಸರ್ಕಾರ ಮುಂದಾಗದಿರೋದು ವಿಷಾಧದ ಸಂಗತಿಯಾಗಿದೆ.