ನಟ ಶಿವರಾಜ್ಕುಮಾರ್ ಅವರಿಗೆ ಅಮೆರಿಕದಲ್ಲಿ ಡಿಸೆಂಬರ್ 24ರಂದು ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಶಿವರಾಜ್ ಕುಮಾರ್ ಆರೋಗ್ಯಕ್ಕಾಗಿ ಹಲವು ಕಡೆಗಳಲ್ಲಿ ಹೋಮ, ಪೂಜೆ ಮಾಡಲಾಗಿದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರು ದೂರವಾಣಿ ಮೂಲಕ ಶಿವರಾಜ್ ಕುಮಾರ್ ಜೊತೆ ಮಾತನಾಡಿ ಅವರ ಆರೋಗ್ಯ ವಿಚಾರಿಸಿದ್ದು ಈ ಬಗ್ಗೆ ಅವರು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ.
‘ಅನಾರೋಗ್ಯದ ನಿಮಿತ್ತ ಇಂದು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್ಕುಮಾರ್ ಅವರಿಗೆ ಕರೆಮಾಡಿ ಮಾತನಾಡಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದೇನೆ. ನನಗೆ ತಿಳಿದಂತೆ ಶಿವರಾಜ್ಕುಮಾರ್ ಅವರ ಆತ್ಮವಿಶ್ವಾಸ, ಧೈರ್ಯ ಮತ್ತು ಸಹೃದಯತೆ ಅವರನ್ನು ಈ ಹೋರಾಟದಲ್ಲಿ ಗೆಲ್ಲಿಸಿಕೊಂಡು ಬರಲಿದೆ ಎಂಬ ವಿಶ್ವಾಸವಿದೆ’ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
‘ಬದುಕಿನ ದಾರಿಯಲ್ಲಿ ಎದುರಾಗಿರುವ ಈ ಸಣ್ಣ ಸಂಕಷ್ಟವನ್ನು ನಿವಾರಿಸಿಕೊಂಡು ಆರೋಗ್ಯವಂತರಾಗಿ ಬರಲಿರುವ ಶಿವರಾಜ್ಕುಮಾರ್ ಅವರ ಆಗಮನವನ್ನು ಎದುರು ನೋಡುತ್ತಿರುವ ಅವರ ಹಿತೈಷಿಗಳಲ್ಲಿ ನಾನೂ ಒಬ್ಬ. ನಾಡಿನ ಹಿರಿಯರ ಆಶೀರ್ವಾದ ಮತ್ತು ಕಿರಿಯರ ಶುಭಹಾರೈಕೆ ಶಿವರಾಜ್ಕುಮಾರ್ ಅವರ ಜೊತೆಗಿದ್ದು ಅವರನ್ನು ಕಾಪಾಡಲಿದೆ’ ಎಂದು ಸಿದ್ದರಾಮಯ್ಯ ಅವರು ಪೋಸ್ಟ್ ಮಾಡಿದ್ದಾರೆ.
ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಉದ್ದೇಶದಿಂದ ಶಿವರಾಜ್ಕುಮಾರ್ ಅವರು ಸಿನಿಮಾದ ಕೆಲಸಗಳಿಗೆ ಬ್ರೇಕ್ ನೀಡಿದ್ದಾರೆ. ಅಮೆರಿಕದಲ್ಲಿ ಅವರು ಒಂದು ತಿಂಗಳಿಗೂ ಹೆಚ್ಚು ಕಾಲ ಇರಲಿದ್ದಾರೆ. ಬಳಿಕ ಭಾರತಕ್ಕೆ ಮರಳಲಿದ್ದಾರೆ. ಶಿವಣ್ಣ ಅಮೆರಿಕಕ್ಕೆ ತೆರಳುವುದಕ್ಕೂ ಮುನ್ನ ಅವರನ್ನು ಆಪ್ತರು ಭೇಟಿಯಾಗಿದ್ದರು. ಅಭಿಮಾನಿಗಳು ಕೂಡ ಮನೆ ಬಳಿ ಬಂದು ಧೈರ್ಯ ತುಂಬಿದ್ದರು. ‘ಭೈರತಿ ರಣಗಲ್’ ಸಿನಿಮಾದ ಯಶಸ್ಸಿನ ಬಳಿಕ ಶಿವಣ್ಣ ಶಸ್ತ್ರಚಿಕಿತ್ಸೆ ಪಡೆಯಲು ಮುಂದಾದರು.
ಶಿವರಾಜ್ಕುಮಾರ್ಗೆ ಫ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಇನ್ಸಿಟ್ಯೂಟ್ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಭಾರತೀಯ ಮೂಲದ ತಜ್ಞ ವೈದ್ಯ ಡಾ. ಮುರುಗೇಶ್ ನೇತೃತ್ವದಲ್ಲಿ ಮಿಯಾಮಿ ಆಸ್ಪತ್ರೆಯಲ್ಲಿ ಶಿವಣ್ಣನಿಗೆ ಆಪರೇಷನ್ ಮಾಡಲಾಗಿದೆ. ಭಾರತೀಯ ಕಾಲಮಾನ ಮಂಗಳವಾರ ರಾತ್ರಿ 11:30ರ ಸುಮಾರಿಗೆ ಶಸ್ತ್ರಚಿಕಿತ್ಸೆ ಮುಗಿದಿದೆ. ಅಮೆರಿಕದ ಕಾಲಮಾನ ಬೆಳಗ್ಗೆ 8 ಗಂಟೆಗೆ ಅಂದರೆ ಭಾರತೀಯ ಕಾಲಮಾನದ ಪ್ರಕಾರ 6 ಗಂಟೆಗೆ ಆಪರೇಷನ್ ಥಿಯೇಟರ್ಗೆ ಶಿವಣ್ಣರನ್ನು ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಸುಮಾರು 6 ಗಂಟೆಗಳ ಕಾಲ ಸರ್ಜರಿ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಶಿವಣ್ಣನೊಂದಿಗೆ ಪತ್ನಿ ಗೀತಾ, ಪುತ್ರಿ ನಿವೇದಿತಾ, ಬಾಮೈದ ಮಧು ಬಂಗಾರಪ್ಪ ಜೊತೆಗಿದ್ದಾರೆ.