ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ ನಟ ದರ್ಶನ್ 7 ತಿಂಗಳ ಬಳಿಕ ಜಾಮೀನು ಪಡೆದು ಹೊರ ಬಂದಿದ್ದಾರೆ. ದರ್ಶನ್ ಜೊತೆ ಸಿನಿಮಾ ಮಾಡಲು ಹಲವು ನಿರ್ದೇಶಕರು ತುದಿಗಾಲಲ್ಲಿ ನಿಂತಿದ್ದರು. ಜೊತೆಗೆ ಕೆಲವೊಂದಷ್ಟು ಸಿನಿಮಾಗಳು ಅನೌನ್ಸ್ ಕೂಡ ಮಾಡಲಾಗಿತ್ತು. ಆದರೆ ಏಕಾಏಕಿ ದರ್ಶನ್ ಜೈಲು ಸೇರಿದ್ದರಿಂದ ಸಾಕಷ್ಟು ತೊಂದರೆ ಉಂಟಾಗಿತ್ತು. ಸದ್ಯ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದು ಅದಕ್ಕೆ ಚಿಕಿತ್ಸೆ ಪಡೆದುಕೊಳ್ತಿದ್ದಾರೆ. ಈ ಮಧ್ಯೆ ದರ್ಶನ್ ಜೊತೆ ಸಿನಿಮಾ ಮಾಡಬೇಕು ಎಂದು ಕೊಂಡಿದ್ದ ನಟ ಕಂ ನಿರ್ದೇಶಕ ಜೋಗಿ ಪ್ರೇಮ್ ದರ್ಶನ್ ಜೊತೆಗಿನ ತಮ್ಮ ಮುಂದಿನ ಸಿನಿಮಾದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಸದ್ಯ ದರ್ಶನ್ ಮೈಸೂರಿನ ಫಾರಂ ಹೌಸ್ ನಲ್ಲಿದ್ದಾರೆ. ಕೆಲ ದಿನದ ಹಿಂದೆ ಹರಿದಾಡಿದ ವಿಡಿಯೋನಲ್ಲಿ ದರ್ಶನ್ ನಡೆಯಲು ಸಹ ಕಷ್ಟಪಡುತ್ತಿದ್ದರು. ಇಂಥಹಾ ಸ್ಥಿತಿಯಲ್ಲಿ ದರ್ಶನ್ ಒಪ್ಪಿಕೊಂಡಿರುವ ಸಿನಿಮಾಗಳನ್ನು ಹೇಗೆ ಮುಗಿಸುತ್ತಾರೆ ಎಂಬ ಪ್ರಶ್ನೆ ಶುರುವಾಗಿದೆ. ದರ್ಶನ್ ಬಂಧನವಾದಾಗ ಅವರು ‘ಡೆವಿಲ್’ ಸಿನಿಮಾದ ಚಿತ್ರೀಕರಣದಲ್ಲಿದ್ದರು. ನಿರ್ದೇಶಕ ಪ್ರೇಮ್ ಜೊತೆ ಮತ್ತೊಂದು ಸಿನಿಮಾ ಮಾಡಲಿದ್ದರು. ಈ ಸಿನಿಮಾಗಳು ನಿಂತು ಹೋಗಿವೆ ಎಂಬ ಸುದ್ದಿಯೂ ಹರಿದಾಡುತ್ತಿತ್ತು, ಇದೀಗ ಈ ಬಗ್ಗೆ ನಟ ಪ್ರೇಮ್ ಮಾತನಾಡಿದ್ದಾರೆ.
ಪ್ರೇಮ್ ನಿರ್ದೇಶಿಸಿ, ಧ್ರುವ ಸರ್ಜಾ ನಟಿಸುತ್ತಿರುವ ‘ಕೆಡಿ’ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿರುವ ಪ್ರೇಮ್, ‘ನಾನು ಹಾಗೂ ದರ್ಶನ್ ಅಣ್ಣ-ತಮ್ಮಂದಿರು. ನಾವು ಒಂದೇ ಕುಟುಂಬದವರು. ನಾನು ಮೊದಲ ಬಾರಿಗೆ ದರ್ಶನ್ಗಾಗಿ ‘ಕರಿಯ’ ಸಿನಿಮಾ ಮಾಡಿದಾಗ ಆಗ ನಾವು ಪರಿಚಯದವರು ಅಷ್ಟೆ ಆದರೆ ಪತ್ನಿ ರಕ್ಷಿತಾ ಅವರಿಗೆ ಅದಾಗಲೇ ಅವರು ಬಹಳ ಆತ್ಮೀಯ ಗೆಳೆಯರು. ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಆಗುವ ಗೆಳೆಯರು. ನನಗೂ ಸಹ ದರ್ಶನ್ ಅವರು ಬಹಳ ಆಪ್ತರು’ ಎಂದಿದ್ದಾರೆ ಪ್ರೇಮ್.
‘ದರ್ಶನ್ ಹಾಗೂ ನಾನು ಒಟ್ಟಿಗೆ ಸಿನಿಮಾ ಮಾಡಬೇಕು ಎಂದು ಅಭಿಮಾನಿಗಳು ಹಲವು ವರ್ಷದಿಂದ ಕೇಳುತ್ತಲೇ ಇದ್ದರು. ಹಾಗಾಗಿ ನಾನು ಖಂಡಿತ ದರ್ಶನ್ಗೆ ಸಿನಿಮಾ ಮಾಡುತ್ತೀನಿ. ಅದರಲ್ಲಿ ಅನುಮಾನವೇ ಬೇಡ. ಎಲ್ಲರೂ ಒಂದೇ ಕುಟುಂಬದ ರೀತಿ. ದರ್ಶನ್ ಅವರು ಆರೋಗ್ಯವಾಗಿದ್ದಿದ್ದರೆ ನಾನೇ ಅವರನ್ನು ಕರೀತಿದ್ದೆ. ಈ ಸಿನಿಮಾದ ಹಾಡನ್ನು ಅವರಿಂದಲೇ ಬಿಡುಗಡೆ ಮಾಡಿಸುತ್ತಿದ್ದೆ. ಆದರೆ ಅವರಿಗೆ ಬೆನ್ನು ನೋವು ಇರುವ ಕಾರಣ ಈಗ ಬೇಡ ಎಂದುಕೊಂಡೆ. ಮುಂದಿನ ದಿನಗಳಲ್ಲಿ ಅವರನ್ನು ಕರೆಯುತ್ತೀನಿ. ನನಗಾಗಲಿ, ರಕ್ಷಿತಾ, ಧ್ರುವ ಅವರಿಗಾಗಲಿ ಎಲ್ಲರಿಗೂ ಬೆಂಬಲ ಕೊಡುತ್ತಾರೆ’ ಎಂದಿದ್ದಾರೆ ನಿರ್ದೇಶಕ ಪ್ರೇಮ್.
ದರ್ಶನ್ ಈಗ ‘ಡೆವಿಲ್’ ಸಿನಿಮಾದಲ್ಲಿ ನಟಿಸುತ್ತಿದ್ದು, ಅದರ ಬಳಿಕ ಪ್ರೇಮ್ ನಿರ್ದೇಶನದ ನಟಿಸಲು ಒಪ್ಪಿಗೆ ನೀಡಿದ್ದರು. ಪ್ರೇಮ್ ಹಾಗೂ ದರ್ಶನ್ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡಲು ಮುಂದಾಗಿತ್ತು. ಆದರೆ ರೇಣುಕಾ ಸ್ವಾಮಿ ಪ್ರಕರಣ ನಡೆದ ಕಾರಣ ‘ಡೆವಿಲ್’ ಸಿನಿಮಾದ ಚಿತ್ರೀಕರಣ ನಿಂತು ಹೋಗಿದೆ. ಕೆಲ ಮಾಹಿತಿಯ ಪ್ರಕಾರ, ‘ಡೆವಿಲ್’ ಸಿನಿಮಾದ ಚಿತ್ರೀಕರಣ ಮುಂದಿನ ತಿಂಗಳು ಪ್ರಾರಂಭ ಆಗಲಿದೆಯಂತೆ. ಅದಾದ ಬಳಿಕ ಪ್ರೇಮ್ ಜೊತೆಗಿನ ಸಿನಿಮಾದಲ್ಲಿ ದರ್ಶನ್ ನಟಿಸುವ ಸಾಧ್ಯತೆ ಇದೆ.