ಮಂಡ್ಯ:- ಚಲಿಸುತ್ತಿದ್ದ ಕಾರಿಗೆ ಮೊಟ್ಟೆ ಹೊಡೆದು ಚಾಲಕನ ಕಣ್ಣಿಗೆ ಕಾರದ ಪುಡಿ ಎರಚಿ ನಗದು ದರೋಡೆ ಮಾಡಿರುವ ಘಟನೆ ಮಂಡ್ಯ ತಾಲ್ಲೂಕಿನ ಬೂದನೂರು ಬಳಿ ಬೆಂ-ಮೈ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಸೋಮವಾರ ರಾತ್ರಿ ಜರುಗಿದೆ.
ಅಕ್ರಮ ಮದ್ಯ ಮಾರಾಟ: ಪ್ರಶ್ನಿಸಿದ ವ್ಯಕ್ತಿಯ ಕೊಲೆ! ಅಬಕಾರಿ ಸಚಿವರ ತವರಲ್ಲೇ ಕೃತ್ಯ!
ಮಂಡ್ಯದ ಗುತ್ತಲು ನಿವಾಸಿ ವಿನೋದ್ ದರೋಡೆಗೆ ಒಳಗಾದವರು. ಬೆಲ್ಲದ ವ್ಯಾಪಾರಿಯಾದ ವಿನೋದ್ ವ್ಯಾಪಾರ ಮುಗಿಸಿಕೊಂಡು ಮದ್ದೂರಿನಿಂದ ಮಂಡ್ಯ ನಗರಕ್ಕೆ ಹಿಂದಿರುಗುವ ವೇಳೆ ಹಳೇ ಬೂದನೂರು-ಹೊಸ ಬೂದನೂರು ನಡುವಿನ ಕಾಲುವೆ ಬಳಿ ಬೈಕ್’ನಲ್ಲಿ ಬಂದ ಮೂವರು ದುಷ್ಕರ್ಮಿಗಳ ತಂಡ ಕಾರಿನ ಗಾಜಿನ ಮೇಲೆ ಮೊಟ್ಟೆ ಹೊಡೆದು ವಾಹನ ಚಾಲನೆ ಮಾಡುತ್ತಿದ್ದ ವಿನೋದ್ ಅವರ ಕಣ್ಣಿಗೆ ಖಾರದ ಪುಡಿ ಎರಚಿದಾಗ ವಾಹನ ನಿಲ್ಲಿಸಲಾಗಿದೆ.
ಈ ವೇಳೆ ವ್ಯಕ್ತಿಯ ಮೇಲೆರಗಿ ಹಲ್ಲೆ ಮಾಡಿರುವ ದುಷ್ಕರ್ಮಿಗಳು 55 ಸಾವಿರ ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿ ತನಿಖೆ ಅರಂಭಿಸಿದ್ದಾರೆ.
ಬೂದನೂರು ಬಳಿ ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ಬೀದಿ ದೀಪವಿಲ್ಲದೆ ಕತ್ತಲು ಅವರಿಸಿದ್ದು ವಾಹನ ಸವಾರರು ಒಬ್ಬಂಟಿಯಾಗಿ ಓಡಾಡಲು ಜೀವ ಭಯ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಥವಾ ಸ್ಥಳೀಯ ಗ್ರಾಪಂ ಬೀದಿ ದೀಪ ವ್ಯವಸ್ಥೆ ಮಾಡುವಂತೆ ಯುವ ಮುಖಂಡ ಶಾಮಿಯಾನ ನಾರಾಯಣ್ ಒತ್ತಾಯಿಸಿದ್ದಾರೆ.
ಶಾಸಕ ಪಿ. ರವಿಕುಮಾರ್ ಗೌಡ ಘಟನೆ ಕುರಿತು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ ಕೊಡಲೇ ಆರೋಪಿಗಳನ್ನು ಬಂಧಿಸುವಂತೆ ಸೂಚಿಸಿದ್ದಾರೆ.