ಹುಬ್ಬಳ್ಳಿ ಡಿ. 23: ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿಗೆ ಕೇಂದ್ರ ಸರ್ಕಾರದಿಂದ ಅನುದಾನ ದೊರೆತಿದೆ. ಬೈಪಾಸ್ ಅಗಲೀಕರಣ ಹಾಗೂ ಉನ್ನತ್ತೀಕರಣ ಕಾಮಗಾರಿ ಭರದಿಂದ ಸಾಗಿದೆ. ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿಯು 2025ರ ಜೂನ್ ವೇಳೆಗೆ ಮುಕ್ತಾಯವಾಗಲಿದೆ ಎಂದು ಕೇಂದ್ರ ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಹ್ಲಾದ್ ಜೋಶಿ ಹೇಳಿದರು.
ಇಂದು ವಿಮಾನ ನಿಲ್ದಾಣ ರಸ್ತೆಯ ಇನ್ಫೋಸಿಸ್ ಮುಂಭಾಗದಲ್ಲಿ ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿನ ರೈಲ್ವೆ ಸೇತುವೆ ಹಾಗೂ ಗಬ್ಬೂರು ಸೇತುವೆ 2025ರ ಸೆಪ್ಟೆಂಬರ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ.
SBI Recruitment: ಉದ್ಯೋಗ ಹುಡುಕುತ್ತಿದ್ದೀರಾ..? SBI ಬ್ಯಾಂಕ್ʼನಲ್ಲಿದೆ ಭರ್ಜರಿ ಉದ್ಯೋಗಾವಕಾಶ! ಲಕ್ಷಗಟ್ಟಲೆ ಸಂಬಳ
ಹೆದ್ದಾರಿಯ ಪಕ್ಕದಲ್ಲಿ ಅವಶ್ಯವಿರುವಲ್ಲಿ ಸರ್ವಿಸ್ ರಸ್ತೆ ಹಾಗೂ ಕೆಳ ಸೇತುವೆಗಳನ್ನು ಕೂಡ ನಿರ್ಮಿಸಲಾಗುತ್ತಿದೆ. ಇದರಿಂದ ಜನರಿಗೆ ಅನುಕೂಲವಾಗಲಿದೆ. ನೇಕಾರ ನಗರ, ತಾರಿಹಾಳ ಹಾಗೂ ಇತರೆಡೆ ಕೆಲವು ವರ್ಷಗಳಿಂದ ಹೆದ್ದಾರಿಯ ಪಕ್ಕದಲ್ಲಿ ಮನೆಗಳನ್ನು ನಿರ್ಮಿಸಿಕೊಂಡವರಿಗೆ ಬೇರೆಡೆ ತೆರಳುವಂತೆ ಸೂಚಿಸಲಾಗಿದೆ. ಅಲ್ಲದೇ ಅವರಿಗೆ ಪರಿಹಾರ ಧನವನ್ನು ವಿತರಿಸಲಾಗುವುದು ಎಂದರು.
ಅತ್ಯಾಕರ್ಷಕ ಹುಬ್ಬಳ್ಳಿ ನಗರಕ್ಕೆ ಸ್ವಾಗತ ಫಲಕ ಅಳವಡಿಕೆ
ವಿಮಾನ ನಿಲ್ದಾಣ ರಸ್ತೆಯ ಇನ್ಫೋಸಿಸ್ ಮುಂಭಾಗದಲ್ಲಿ ಹುಬ್ಬಳ್ಳಿ ಧಾರವಾಡ ಹೆದ್ದಾರಿಯಿಂದ ಹುಬ್ಬಳ್ಳಿ ನಗರಕ್ಕೆ ಆಗಮಿಸುವವರಿಗೆ ಅತ್ಯಾಕರ್ಷಕ ಹುಬ್ಬಳ್ಳಿ ನಗರಕ್ಕೆ ಸ್ವಾಗತ ಎನ್ನುವ ಫಲಕವನ್ನು ಅಳವಡಿಸಲಾಗುತ್ತದೆ. ಅದರ ಜೊತೆಗೆ ವೃತ್ತವನ್ನು ನಿರ್ಮಿಸಿ, ಪೌಂಟೇನ್ ಮಾದರಿಯನ್ನು ಕಟ್ಟಲು ಕ್ರಮ ಕೈಗೊಳ್ಳುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೆದ್ದಾರಿ ನಿರ್ಮಾಣಕ್ಕೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಹಕಾರ ಕೂಡ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ., ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ, ಡಿಸಿಪಿ ರವೀಶ್ ಆರ್., ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಾದ ಭುವನೇಶ್ವರಕುಮಾರ ಸೇರಿದಂತೆ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.