ಪುಷ್ಪ 2 ಸಿನಿಮಾದ ಪ್ರೀಮಿಯರ್ ವೇಳೆ ಹೈದರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸದಿಂತೆ ಈಗಾಗಲೇ ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಲಾಯಿತು. ಅಲ್ಲು ಅರ್ಜುನ್ ಅವರು ಮೃತರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಕೊಡಬೇಕು ಎಂದು ಕೆಲವರು ಆಗ್ರಹಿಸಿದ್ದು ಅಲ್ಲು ಅರ್ಜುನ್ ಮನೆ ಮೇಲೆ ದಾಳಿ ನಡೆಸಿದ್ದರು. ಹೀಗಿರುವಾಗಲೇ ತೆಲಂಗಾಣ ಸಿನಿಮಾಟೊಗ್ರಫಿ ಸಚಿವ ಕೊಮಟಿ ವೆಂಕಟ್ ರೆಡ್ಡಿ ಹೊಸ ಬೇಡಿಕೆ ಇಟ್ಟಿದ್ದು ಮೃತರ ಕುಟುಂಬಕ್ಕೆ ಅಲ್ಲು ಅರ್ಜುನ್ 20 ಕೋಟಿ ರೂಪಾಯಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲು ಅರ್ಜುನ್ ಮನೆಯ ಎದುರು ಪ್ರತಿಭಟನೆ ನಡೆಸಿರುವ ಕೆಲವರು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ದಾಳಿ ಎಲ್ಲರಲ್ಲೂ ಆತಂಕ ಮೂಡಿಸಿದೆ. ಈ ದಾಳಿ ಬೆನ್ನಲ್ಲೇ ಮಾತನಾಡಿರುವ ಕೊಮಟಿ ರೆಡ್ಡಿ ಅವರು 20 ಕೋಟಿ ರೂಪಾಯಿ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ.
‘ಪುಷ್ಪ 2 ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಮಾಡಿದೆ. ಅಲ್ಲು ಅರ್ಜುನ್ ಅವರು ಈ ಕಲೆಕ್ಷನ್ನಲ್ಲಿ 20 ಕೋಟಿ ರೂಪಾಯಿ ಹಣವನ್ನು ಕುಟುಂಬಕ್ಕೆ ನೀಡಬಹುದು. ಈ ಮೂಲಕ ಸಂತಸ್ತ ಕುಟುಂಬಕ್ಕೆ ಸಹಾಯ ಮಾಡಬಹುದು’ ಎಂದು ಸಚಿವ ಕೊಮಟಿ ವೆಂಕಟ್ ರೆಡ್ಡಿ ಹೇಳಿದ್ದಾರೆ.
‘ಅಲ್ಲು ಅರ್ಜುನ್ ಥಿಯೇಟರ್ ಬಳಿ ಬರಬಾರದು ಎಂದಿತ್ತು. ಆದಾಗ್ಯೂ ಅವರು ಬಂದರು. ಅವರು ಕಾರಿನ ಸನ್ರೂಫ್ ಬಳಿ ಬಂದು ಕೈ ಬೀಸಿದರು. ಇದರಿಂದ ಸಾಕಷ್ಟು ಜನರು ಸೇರುವಂತೆ ಆಯಿತು. ಇದರಿಂದ ಸಾವು ಸಂಭವಿಸಿತು. ಈ ಘಟನೆ ಬಗ್ಗೆ ಅಲ್ಲು ಅರ್ಜುನ್ ಅವರಿಗೆ ಮಾಹಿತಿ ನೀಡಲಾಯಿತು. ಆದಾಗ್ಯೂ ಅಲ್ಲು ಅರ್ಜುನ್ ಅವರು ಸಿನಿಮಾ ನೋಡುವುದನ್ನು ಮುಂದುವರಿಸಿದರು. ಇದು ನಿರ್ಲಕ್ಷ್ಯದ ಸೂಚನೆ’ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಸಿನಿಮಾ 2000 ಕೋಟಿ ರೂಪಾಯಿ ಗಳಿಸಿದೆ, 3000 ಕೋಟಿ ರೂಪಾಯಿ ಗಳಿಸಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಅವರ ಕುಟುಂಬಕ್ಕೆ 20 ಕೋಟಿ ರೂಪಾಯಿ ಕೊಡಬಹುದಲ್ಲ. ಇದು ನನ್ನ ಬೇಡಿಕೆ. ಅಲ್ಲು ಅರ್ಜುನ್ ಹಾಗೂ ಸಿನಿಮಾ ನಿರ್ಮಾಪಕರು 20 ಕೋಟಿ ರೂಪಾಯಿ ಕೊಡಬೇಕು’ ಎಂದು ಕೊಮಟಿ ರೆಡ್ಡಿ ಆಗ್ರಹಿಸಿದ್ದಾರೆ.