ಅಸ್ಥಿರತೆಗೆ ಇನ್ನೊಂದು ಹೆಸರೇ ಕೃಷಿ. ಈ ಕ್ಷೇತ್ರದಲ್ಲಿರುವಷ್ಟು ಚಂಚಲತೆ, ಆತಂಕ ಮತ್ತ್ಯಾವ ಕ್ಷೇತ್ರದಲ್ಲೂಇಲ್ಲ. ಸರಕಾರದ ನೀತಿಗಳು, ದಲ್ಲಾಳಿಗಳು, ಮಾರುಕಟ್ಟೆಯಲ್ಲಿನ ಲೋಪಗಳಿಂದಾಗಿ ಇಂದಿಗೂ ರೈತರು ತಮ್ಮ ಬೆಳೆಗಳಿಗೆ ಸೂಕ್ತ ಬೆಲೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರತಿ ವರ್ಷ ಡಿಸೆಂಬರ್ 23ರಂದು ಕಿಸಾನ್ ದಿವಸ್ ಅಥವಾ ರೈತರ ದಿನ ಆಚರಿಸಲಾಗುತ್ತಿದೆ. ದೇಶದ ಕಠಿಣ ಪರಿಶ್ರಮಿ, ದೇಶದ ಆಹಾರ ಭದ್ರತೆ ಮತ್ತು ಆರ್ಥಿಕತೆಯ ಬೆನ್ನೆಲುಬಾಗಿರುವ ರೈತರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ದಿನ ಆಚರಣೆಯಲ್ಲಿದೆ.
ಸಾಲು-ಸಾಲು ಕಷ್ಟಗಳಿಂದ ಬೇಸತ್ತಿದ್ದೀರಾ.? ಸೋಮವಾರ ಈ ಕೆಲಸ ಮಾಡಿದ್ರೆ ಶಿವನ ಕೃಪೆ ನಿಮಗಿರುತ್ತದೆ!
ಇಂದು ದೇಶದ ಐದನೇ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವೂ ಹೌದು. ಚರಣ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಅನೇಕ ರೈತ ಪರ ನಿರ್ಧಾರಗಳ ಮೂಲಕ ಕೃಷಿ ಕ್ಷೇತ್ರಕ್ಕೆ ನೆರವಾಗಿದ್ದವರು. ಇದರ ಜತೆಗೆ, ಅವರ ಜನ್ಮದಿನವನ್ನೇ ದೇಶದಲ್ಲಿ ರೈತರ ದಿನವಾಗಿ ಆಚರಿಸಲು ಹಲವು ಕಾರಣಗಳಿವೆ. ಉತ್ತರ ಪ್ರದೇಶ, ಪಂಜಾಬ್, ಹರಿಯಾಣ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಪ್ರತಿ ವರ್ಷ ರಾಷ್ಟ್ರೀಯ ರೈತ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಇತರ ರಾಜ್ಯಗಳಲ್ಲಿಯೂ ಆಚರಣೆಯನ್ನು ಕಾಣಬಹುದಾಗಿದೆ.
ಚೌಧರಿ ಚರಣ್ ಸಿಂಗ್ ಜನ್ಮದಿನ
ಚೌಧರಿ ಚರಣ್ ಸಿಂಗ್ ಅವರು ಸ್ವತಃ ಕೃಷಿಕರಾಗಿದ್ದವರು. ಇತರ ರೈತರು ಎದುರಿಸುತ್ತಿರುವ ಕಷ್ಟಗಳನ್ನು ಅರಿತಿದ್ದರು. 1979ರಿಂದ 1980ರ ಅವಧಿಯಲ್ಲಿ ಅವರು ಪ್ರಧಾನ ಮಂತ್ರಿ ಆಗಿದ್ದಾಗ ಅನೇಕ ರೈತ ಪರ ಯೋಜನೆಗಳನ್ನು ಜಾರಿಗೆ ತಂದಿದ್ದಲ್ಲದೆ, ನೀತಿಗಳನ್ನೂ ರೂಪಿಸಿದ್ದರು. ರೈತ ಪರವಲ್ಲದ ಕೆಲವು ಕೃಷಿ ಕಾನೂನುಗಳನ್ನು ಕೊನೆಗೊಳಿಸಿದ ಮತ್ತು ರೈತರ ಹಕ್ಕುಗಳಿಗಾಗಿ ಹೋರಾಡಿದ ಮೊದಲ ಪ್ರಧಾನಿಯಾಗಿ ಅವರು ಗುರುತಿಸಿಕೊಂಡಿದ್ದಾರೆ. ಜಮೀನ್ದಾರಿ ಪದ್ಧತಿಯನ್ನು ಸ್ಥಗಿತಗೊಳಿಸಿದ್ದ ಅವರು, ರೈತರಿಗೆ ನೆರವಾಗುವುದಕ್ಕಾಗಿ ಭೂಸಂರಕ್ಷಣಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದರು.
ರೈತರ ದಿನದ ಮಹತ್ವವೇನು?
ರೈತರನ್ನು ಗುರುತಿಸಿ ಗೌರವಿಸುವ ನಿಟ್ಟಿನಲ್ಲಿ ರೈತರ ದಿನ ಬಹಳಷ್ಟು ಮಹತ್ವ ಪಡೆದುಕೊಂಡಿದೆ. ಅದೇ ರೀತಿ ರೈತರಲ್ಲಿ ಹೊಸ ಕೃಷಿ ತಂತ್ರಜ್ಞಾನಗಳ ಬಗ್ಗೆ ಅರಿವು ಮೂಡಿಸಲು, ಅವರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರ ಸೂಚಿಸುವುದಕ್ಕಾಗಿಯೂ ಬಳಸಿಕೊಳ್ಳಲಾಗುತ್ತಿದೆ. ಕಡಿಮೆ ಇಳುವರಿ, ಸಾಲದ ಲಭ್ಯತೆ ಇಲ್ಲದಿರುವುದು, ಕಳಪೆ ಮೂಲಸೌಕರ್ಯ ಇತ್ಯಾದಿ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದೆ. ಎಲ್ಲದಕ್ಕಿಂತ ಮಿಗಿಲಾಗಿ, ರೈತರು ದೇಶಕ್ಕೆ ನೀಡುತ್ತಿರುವ ಕೊಡುಗೆಗೆ ಅವರಿಗೆ ಧನ್ಯವಾದ ಸಮರ್ಪಿಸಲು ಈ ದಿನವನ್ನು ಮಹತ್ವದ್ದೆಂದು ಪರಿಗಣಿಸಲಾಗಿದೆ.
ರೈತರ ದಿನ ಆರಂಭವಾದದ್ದು ಯಾವಾಗ?
2001ರಿಂದ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವನ್ನು ರಾಷ್ಟ್ರೀಯ ರೈತರ ದಿನವನ್ನಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿತು. ಅಂದಿನಿಂದ ಬಳಿಕ ಪ್ರತಿ ವರ್ಷ ಡಿಸೆಂಬರ್ 23ರಂದು ರಾಷ್ಟ್ರೀಯ ರೈತರ ದಿನ ಆಚರಿಸಲಾಗುತ್ತಿದೆ. ಮತ್ತೊಬ್ಬರು ಮಾಜಿ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಕೂಡ ರೈತ ಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರು. ಮಹತ್ಚದ ‘ಜೈ ಜವಾನ್ ಜೈ ಕಿಸಾನ್’ ಘೋಷಣೆ ಮಾಡಿದ್ದರು. ಶಾಸ್ತ್ರಿ ಅವರ ಹಾದಿಯಲ್ಲೇ ಅಧಿಕಾರ ನಡೆಸಿದ ಚೌಧರಿ ಚರಣ್ ಸಿಂಗ್ ಕೂಡ. ಅಧಿಕಾರದಲ್ಲಿದ್ದ ಅಲ್ಪಾವಧಿಯಲ್ಲೇ ರೈತರಿಗಾಗಿ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದರು.