ಕೋಲಾರ – ಕೋಲಾರದ ಜಿಲ್ಲಾಡಳಿತ ಭವನದಲ್ಲಿ ಉಪವಿಭಾಗಾಧಿಕಾರಿ ಡಾ.ಮೈತ್ರಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಡಿ.ಮುನೇಶ್ ಚಂಚಿಮಲೆ, ಸಿದ್ಧಾರ್ಥ ಆನಂದ ನಡುವೆ ಮಾತಿನ ಚಕಮಕಿ ನಡೆದಿದೆ. ಅಲ್ಲದೇ, ಗ್ರಾಮಾಂತರ ಪೊಲೀಸರು ಮುನೇಶ್ ಹಾಗೂ ಸಿದ್ಧಾರ್ಥ ಅವರನ್ನು ಠಾಣೆಗೆ ಕರೆದೊಯ್ದು ಕೊನೆಗೆ ಬಿಡುಗಡೆ ಮಾಡಿದ್ದಾರೆ. ಕೊನೆಯಲ್ಲಿ ರಾಜಿ ಸಂಧಾನದಲ್ಲಿ ಕೊನೆಗೊಂಡಿತು. ಜಿಲ್ಲೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ದಾಖಲೆ ನೀಡಿ ಕ್ರಮಕ್ಕೆ ಆಗ್ರಹಿಸಲು ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮೈತ್ರಿ ಅವರನ್ನು ಭೇಟಿಯಾದಾಗ ಈ ಘಟನೆ ನಡೆದಿದೆ.
‘ನಾವು ರೋಲ್ಕಾಲ್ ಗಿರಾಕಿಗಳಲ್ಲ. ಕೆಟ್ಟದಾಗಿ ವರ್ತಿಸಿಲ್ಲ, ನಿಂದಿಸಿಲ್ಲ. ನಾವು ನೀಡಿದ ಅರ್ಜಿಯನ್ನು ಉಪವಿಭಾಗಾಧಿಕಾರಿಯು ಜನರ ಮುಂದೆ ಕಿತ್ತು ಬಿಸಾಡಿದರು’ ಎಂಬುದಾಗಿ ದೂರುದಾರರು ಗಲಾಟೆ ಮಾಡಿದ್ದಾರೆ. ಸರ್ಕಾರಿ ಅಧಿಕಾರಿಗಳನ್ನು ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದರು, ವಿಡಿಯೋ ಮಾಡಿದವರು ಎಂಬ ಹಿನ್ನೆಲೆಯಲ್ಲಿ ಪೊಲೀಸರು ದೂರುದಾರರಿಬ್ಬರನ್ನು ಮಧ್ಯಾಹ್ನ ಠಾಣೆಗೆ ಕರೆದೊಯ್ದು ಸಂಜೆ ಉಪವಿಭಾಗಾಧಿಕಾರಿ ಕಚೇರಿ ಬಳಿ ಮಾತುಕತೆಗೆ ಕರೆತಂದು ಬಿಟ್ಟಿದ್ದಾರೆ.