ಸುದೀಪ್ ಅವರು ಪೂರ್ಣ ಪ್ರಮಾಣದ ನಾಯಕರಾಗಿ ಬಿಗ್ ಸ್ಕ್ರೀನ್ ಗೆ ಎಂಟ್ರಿಕೊಡದೆ ಎರಡೂವರೆ ವರ್ಷವಾಗಿದೆ. ಸುದೀಪ್ ವೃತ್ತಿ ಜೀವನದಲ್ಲಿಯೇ ಇಷ್ಟು ದೊಡ್ಡ ಗ್ಯಾಪ್ ಅನ್ನು ಈ ಹಿಂದೆ ಅವರು ತೆಗೆದುಕೊಂಡಿರಲಿಲ್ಲ. ಇದೀಗ ಸಾಕಷ್ಟು ಸಮಯದ ಬಳಿಕ ಬಿಗ್ ಸ್ಕ್ರೀನ್ ನಲ್ಲಿ ಘರ್ಜಿಸಲು ಸುದೀಪ್ ರೆಡಿಯಾಗಿದ್ದಾರೆ. ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದ ಟ್ರೈಲರ್ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದೆ.
‘ಮ್ಯಾಕ್ಸ್’ ಸಿನಿಮಾದ ಟ್ರೈಲರ್ ನಾಳೆ ಅಂದರೆ ಡಿಸೆಂಬರ್ 22 ರಂದು ಬಿಡುಗಡೆ ಆಗಲಿದೆ. ಬೆಳಿಗ್ಗೆ 11:08 ನಿಮಿಷಕ್ಕೆ ಟ್ರೈಲರ್ ಬಿಡುಗಡೆ ಆಗಲಿದೆ. ಸಿನಿಮಾದ ಟ್ರೈಲರ್ ಬಿಡುಗಡೆ ಸುದ್ದಿಯನ್ನು ಹಂಚಿಕೊಂಡಿರುವ ಸುದೀಪ್, ‘ಮ್ಯಾಕ್ಸ್’ ಸಿನಿಮಾದ ಬಿಡುಗಡೆ ಪೂರ್ವ ಅಬ್ಬರಕ್ಕೆ ತಯಾರಾಗಿ ಎಂದಿದ್ದಾರೆ. ಪೋಸ್ಟರ್ ಒಂದನ್ನು ಸುದೀಪ್ ಹಂಚಿಕೊಂಡಿದ್ದು, ದೊಡ್ಡ ವಾಹನವೊಂದರ ಮೇಲೆ ರಕ್ತ ಸಿಕ್ತರಾಗಿರುವ ಸುದೀಪ್ ಒಂದು ಕೈಯಲ್ಲಿ ಬಂದೂಕು ಇನ್ನೊಂದು ಕೈಯಲ್ಲಿ ಬಿಯರ್ ಗ್ಲಾಸ್ ಹಿಡಿದ ಚಿತ್ರ ಪೋಸ್ಟರ್ನಲ್ಲಿದೆ.
‘ಮ್ಯಾಕ್ಸ್’ ಸಿನಿಮಾ ಒಂದು ರಾತ್ರಿಯಲ್ಲಿ ನಡೆಯುವ ಕತೆಯನ್ನು ಹೊಂದಿದ್ದು, ಸಿನಿಮಾದಲ್ಲಿ ಸುದೀಪ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ರಾತ್ರಿಯಲ್ಲಿ ನಡೆಯುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ ಎನ್ನಲಾಗುತ್ತಿದೆ. ಸಿನಿಮಾದ ಟೀಸರ್, ಕೆಲವು ಸಣ್ಣ ಪುಟ್ಟ ತುಣುಕುಗಳು ಈಗಾಗಲೇ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಈಗಾಗಲೇ ಕುತೂಹಲ ಮೂಡಿಸಿವೆ.
ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾವನ್ನು ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದು, ತಮಿಳಿನ ಖ್ಯಾತ ನಿರ್ಮಾಪಕ ಕಲೈಪುಲಿ ಎಸ್ ತನು ನಿರ್ಮಾಣ ಮಾಡಿದ್ದಾರೆ. ಕಲೈಪುಲಿ ಅವರು ರಜನೀಕಾಂತ್, ವಿಜಯ್ ಸೇರಿದಂತೆ ಹಲವು ಸೂಪರ್ ಸ್ಟಾರ್ ನಟರ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಸಿನಿಮಾ ಡಿಸೆಂಬರ್ 25ಕ್ಕೆ ತೆರೆಗೆ ಬರಲಿದ್ದು ಅಭಿಮಾನಿಗಳು ಕಿಚ್ಚನ ಸಿನಿಮಾಗಾಗಿ ತುದಿಗಾಲಲ್ಲಿ ನಿಂತು ಕಾಯ್ತಿದ್ದಾರೆ.