ಬೆಳಗಾವಿ:- ಇಡೀ ರಾತ್ರಿ ಪೊಲೀಸರು ಸುತ್ತಾಡಿಸಿದ್ದಾರೆ. ನನಗೆ ಜೀವಭಯವಿದೆ ಎಂದು CT ರವಿ ಹೇಳಿದ್ದಾರೆ.
ಪರಿಷತ್ ಸದಸ್ಯ ಸಿಟಿ ರವಿ ಅವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಬಂಧಿಸಿರುವ ಪೊಲೀಸರು ಸಿಟಿ ರವಿ ಅವರನ್ನು ರಾತ್ರಿ ಇಡೀ ಸುತ್ತಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ಖುದ್ದು ಸಿಟಿ ರವಿ ಅವರೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕಳೆದ ರಾತ್ರಿ ನನಗೆ ಒಟ್ಟು ಮೂರು ಜಿಲ್ಲೆಗಳ ದರ್ಶನ ಮಾಡಿಸಿದ್ದಾರೆ.
ಬೆಳಗಾವಿ, ಧಾರವಾಡ, ಬಾಗಲಕೋಟೆ ಜಿಲ್ಲೆಗಳ ದರ್ಶನ ಮಾಡಿಸಿದ್ದಾರೆ. ಇದೆಲ್ಲ ಸರ್ವಾಧಿಕಾರಿ ಸರ್ಕಾರದಲ್ಲಿ ಮಾತ್ರ ಸಾಧ್ಯ. ಇದು ಹೆಚ್ಚು ದಿನ ನಡೆಯಲ್ಲ. ಎಲ್ಲದಕ್ಕೂ ಲೆಕ್ಕಚುಕ್ತಾ ಆಗಿಯೇ ಆಗುತ್ತದೆ. ಆರೋಗ್ಯ ತಪಾಸಣೆ ಆಗಿಲ್ಲ. ಯಾವ ಕಾರಣಕ್ಕೆ ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ಹೇಳಿಲ್ಲ. ಎಫ್ಐಆರ್ ಪ್ರತಿ ಕೂಡ ನೀಡಿಲ್ಲ. ಜನಪ್ರತಿನಿಧಿಯನ್ನು ಹೇಗೆ ನಡೆಸಿಕೊಳ್ಳಬೇಕೋ ಹಾಗೆ ನನ್ನ ನಡೆಸಿಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಎಸ್ಪಿ ಭೀಮಾ ಶಂಕರ್ ನೇತೃತ್ವದಲ್ಲಿ ಫುಲ್ ಸುತ್ತಾಟ ಮಾಡಲಾಗಿದೆ ಎನ್ನಲಾಗಿದೆ. ಯರಗಟ್ಟಿ ಬಳಿಯ ಡಾಬಾದಲ್ಲಿ ಇಂದು ಬೆಳಗ್ಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಕೆಲವೇ ಕ್ಷಣಗಳಲ್ಲಿ ಕೋರ್ಟ್ಗೆ ಸಿಟಿ ರವಿ ಹಾಜರು ಪಡಿಸುವ ಸಾಧ್ಯತೆ ಇದೆ.