ಬಾಯಿ ಹುಣ್ಣು ತುಂಬಾ ನೋವನ್ನು ಉಂಟು ಮಾಡುವ ಸಮಸ್ಯೆ. ಇದು ಸಾಮಾನ್ಯವಾಗಿ ಅತಿಯಾದ ದೇಹ ಉಷ್ಣತೆಯಿಂದ ಮೂಡುವುದು ಎಂದು ಹೇಳಲಾಗುತ್ತದೆ. ಇದು ತುಟಿಯ ಕೆಳಭಾಗ, ಒಸಡು, ನಾಲಗೆ ಕೆಳಭಾಗ, ಮೇಲ್ಭಾಗ, ಗಂಟಲು, ಬಾಯಿಯ ಮೇಲ್ಭಾಗದಲ್ಲಿ ಮೂಡಬಹುದು. ಬಾಯಿ ಹುಣ್ಣು ಇದ್ದರೆ ಆಗ ಯಾವುದೇ ಆಹಾರ ತಿನ್ನಲು ತುಂಬಾ ಕಷ್ಟವಾಗುವುದು
ಇದನ್ನು ಬಾಯಿಯ ಅಲ್ಸರ್ ಎಂದು ಕೂಡ ಕರೆಲಾಗುತ್ತದೆ. ಬಾಯಿಯ ವಿಚಾರವಾದ ಕಾರಣ ಯಾವುದೇ ಸಾಮಾನ್ಯ ಔಷಧಿಗಳನ್ನು ಬಳಸಿದರೆ ಅದು ಹೊಟ್ಟೆ ಸೇರಿ ಮತ್ತೊಂದು ಸಮಸ್ಯೆ ಹುಟ್ಟುಹಾಕಬಹುದು. ಇದರ ಬದಲಿಗೆ ಬಾಯಿಯ ಸಮಸ್ಯೆ ನಿವಾರಣೆ ಮಾಡಲು ಕೆಲವು ಮನೆಮದ್ದುಗಳನ್ನು ಬಳಸಿದರೆ ಅದು ತುಂಬಾ ಪರಿಣಾಕಾರಿ ಆಗಿರುವುದು. ಅಂತಹ ಕೆಲವು ಮನೆಮದ್ದುಗಳ ಬಗ್ಗೆ ತಿಳಿಯಿರಿ.
ಸಾಮಾನ್ಯವಾಗಿ ಬಾಯಿಯ ಹುಣ್ಣುಗಳು ಒಂದು ಅಥವಾ ಎರಡು ವಾರಗಳಲ್ಲಿ ತಾನಾಗಿಯೇ ಗುಣವಾಗುತ್ತದೆ. ಆದರೂ ಇನ್ನೂ ಬೇಗ ಈ ಸಮಸ್ಯೆ ನಿವಾರಣೆಯಾಗಬೇಕೆಂದರೆ ಕೆಲವು ನೈಸರ್ಗಿಕ ಮನೆಮದ್ದನ್ನು ಬಳಸಬೇಕು. ಇವು ಬಾಯಿ ಹುಣ್ಣುಗಳನ್ನು ತ್ವರಿತವಾಗಿ ತೊಡೆದುಹಾಕಲು ಸಹಾಯ ಮಾಡುತ್ತದೆ.
ತೆಂಗಿನ ಹಾಲು: ತೆಂಗಿನ ಹಾಲು ಹುಣ್ಣುಗಳಿಗೆ ಅದ್ಭುತ ಪರಿಹಾರವಾಗಿದೆ. ಇತ್ತೀಚೆಗೆ ಜರ್ನಲ್ “ಫೈಟೋಥೆರಪಿ ರಿಸರ್ಚ್” ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ತೆಂಗಿನ ಹಾಲಿನಲ್ಲಿರುವ ಉರಿಯೂತದ ಗುಣಲಕ್ಷಣಗಳು ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಇದರ ನೈಸರ್ಗಿಕ ತಂಪಾಗಿಸುವ ಗುಣವು ಹುಣ್ಣುಗಳನ್ನು ಶಮನಗೊಳಿಸುತ್ತದೆ ಮತ್ತು ತ್ವರಿತ ಫಲಿತಾಂಶಗಳನ್ನು ನೀಡುತ್ತದೆ.
ಇದನ್ನು ಬಳಸುವುದು ಹೇಗೆ?: ಮೊದಲು ತೆಂಗಿನಕಾಯಿಯನ್ನು ತೆಗೆದುಕೊಂಡು ಚೆನ್ನಾಗಿ ತುರಿದುಕೊಳ್ಳಿ. ತೆಂಗಿನ ತುರಿಗೆ ಸ್ವಲ್ಪ ನೀರು ಮಿಕ್ಸ್ ಮಾಡಿ, ರುಬ್ಬಿಕೊಂಡು ಫಿಲ್ಟರ್ ಮಾಡಿ. ಇದರಿಂದ ತೆಂಗಿನ ಹಾಲು ಸಿಗುತ್ತದೆ. ಖಾಲಿ ಹೊಟ್ಟೆಯಲ್ಲಿ ತೆಂಗಿನ ಹಾಲನ್ನು ಕುಡಿಯುವುದರಿಂದ ಶೀಘ್ರದಲ್ಲೇ ಬಾಯಿಯ ಹುಣ್ಣು ಸಮಸ್ಯೆ ನಿವಾರಣೆ ಆಗುತ್ತದೆ.
ಲೈಕೋರೈಸ್ ರೂಟ್ ಪುಡಿ: ಲೈಕೋರೈಸ್ ಮೂಲವನ್ನು ಸಾಂಪ್ರದಾಯಿಕ ಔಷಧದಲ್ಲಿ ಬಳಸಲಾಗುತ್ತದೆ. ಜ್ಯೇಷ್ಠಮಧು ಪುಡಿ ಉರಿಯೂತದ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ. ಇರಾನ್ ಜರ್ನಲ್ ಆಫ್ ಮೆಡಿಕಲ್ ಸೈನ್ಸಸ್ನಲ್ಲಿ ಪ್ರಕಟವಾದ ಅಧ್ಯಯನವು ಜ್ಯೇಷ್ಠಮಧು ಪುಡಿ ಹುಣ್ಣುಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಎಂದು ಬಹಿರಂಗಪಡಿಸಿದೆ. ಅಲ್ಲದೇ, ಜ್ಯೇಷ್ಠಮಧು ನೋವು ನಿವಾರಕ ಗುಣಗಳನ್ನು ಹೊಂದಿದೆ. ಇದು ಹುಣ್ಣಿನ ಮೇಲೆ ರಕ್ಷಣಾತ್ಮಕ ಲೇಪನವನ್ನು ರೂಪಿಸುತ್ತದೆ, ಕಿರಿಕಿರಿಯನ್ನು ತಡೆಗಟ್ಟುತ್ತದೆ ಮತ್ತು ಬಾಯಿ ಹುಣ್ಣನ್ನು ಸುಲಭವಾಗಿ ಗುಣಪಡಿಸುತ್ತದೆ. ಇದಕ್ಕಾಗಿ 1 ಟೀಚಮಚ ಜ್ಯೇಷ್ಠಮಧು ಬೇರಿನ ಪುಡಿಯನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ನೇರವಾಗಿ ಗಾಯದ ಮೇಲೆ ಹಚ್ಚಿ ಮತ್ತು ಇದನ್ನು ತೊಳೆಯುವ ಮುನ್ನ 10-15 ನಿಮಿಷಗಳ ಕಾಲ ಬಿಡಿ. ಹೀಗೆ ದಿನಕ್ಕೆರಡು ಬಾರಿ ಮಾಡಿದರೆ ಹುಣ್ಣು ಬೇಗ ವಾಸಿಯಾಗುತ್ತದೆ.
ಜೇನುತುಪ್ಪ ಮತ್ತು ಅರಿಶಿನ ಮಿಶ್ರಣ: ಜೇನುತುಪ್ಪವು ನೈಸರ್ಗಿಕವಾಗಿ ಬ್ಯಾಕ್ಟೀರಿಯಾ ವಿರೋಧಿಯಾಗಿದೆ. ಅದೇ ರೀತಿ ಅರಿಶಿನವು ಕರ್ಕ್ಯುಮಿನ್ನಲ್ಲಿ ಸಮೃದ್ಧವಾಗಿದೆ. ಇದು ಉರಿಯೂತದ ಮತ್ತು ಗುಣಪಡಿಸುವ ಗುಣಲಕ್ಷಣಗಳನ್ನು ಹೊಂದಿದೆ. ಇವೆಲ್ಲವೂ ಬಾಯಿ ಹುಣ್ಣನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. 1 ಚಮಚ ಜೇನುತುಪ್ಪವನ್ನು ಒಂದು ಚಿಟಿಕೆ ಅರಿಶಿನದೊಂದಿಗೆ ಬೆರೆಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಹುಣ್ಣಿನ ಮೇಲೆ ಹಚ್ಚಿ, 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಬೆಚ್ಚಗಿನ ನೀರಿನಿಂದ ನಿಮ್ಮ ಬಾಯಿಯನ್ನು ತೊಳೆಯಿರಿ. ಹೀಗೆ ನಿಯಮಿತವಾಗಿ ಮಾಡಿದರೆ ಹುಣ್ಣು ಬೇಗ ಗುಣವಾಗುತ್ತದೆ.
ಅಲೋವೆರಾ ಜೆಲ್: ಅಲೋವೆರಾ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣಪಡಿಸುವ ಗುಣಲಕ್ಷಣಗಳನ್ನು ಹೊಂದಿದೆ. ಆದರೆ ಇದು ಬಾಯಿಯ ಹುಣ್ಣುಗಳಿಗೆ ಉತ್ತಮ ಪರಿಹಾರವಾಗಿದೆ ಎಂದು ನಿಮಗೆ ತಿಳಿದಿದ್ಯಾ? ಇದರ ಹಿತವಾದ ಮತ್ತು ಉರಿಯೂತದ ಗುಣಲಕ್ಷಣಗಳು ತ್ವರಿತ ಪರಿಹಾರವನ್ನು ನೀಡುತ್ತದೆ. ಇದಕ್ಕಾಗಿ ತಾಜಾ ಅಲೋವೆರಾ ಎಲೆಗಳನ್ನು ಕತ್ತರಿಸಿ ಜೆಲ್ ಅನ್ನು ಹೊರ ತೆಗೆಯಿರಿ. ನಂತರ ಕ್ಲೀನ್ ಹತ್ತಿ ಪ್ಯಾಡ್ ಬಳಸಿ ಗಾಯಕ್ಕೆ ನೇರವಾಗಿ ಜೆಲ್ ಹಚ್ಚಿ. ದಿನಕ್ಕೆ 2-3 ಬಾರಿ ಹೀಗೆ ಮಾಡಿದರೆ ಹುಣ್ಣು ಬೇಗ ನಿವಾರಣೆ ಆಗುತ್ತದೆ.
ಲವಂಗ ಎಣ್ಣೆ: ಲವಂಗದ ಎಣ್ಣೆ ಕೇವಲ ಹಲ್ಲು ನೋವನ್ನು ನಿವಾರಿಸುವುದಷ್ಟೇ ಅಲ್ಲದೇ, ಬಾಯಿ ಹುಣ್ಣಿನ ನೋವನ್ನು ಸಹ ನಿವಾರಿಸುತ್ತದೆ. ಮುಖ್ಯವಾಗಿ ಇದರ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ. ಲವಂಗ ಎಣ್ಣೆಯ ಕೆಲವು ಹನಿಗಳನ್ನು ತೆಂಗಿನ ಎಣ್ಣೆಯೊಂದಿಗೆ ಮಿಶ್ರಣ ಮಾಡಿ, ಕಾಟನ್ ಪ್ಯಾಡ್ನಿಂದ ಈ ಮಿಶ್ರಣವನ್ನು ಹುಣ್ಣಿನ ಮೇಲೆ ಹಚ್ಚಿ. 5 ನಿಮಿಷಗಳ ನಂತರ ಬಾಯಿ ತೊಳೆದರೆ ಉತ್ತಮ ಫಲಿತಾಂಶವನ್ನು ಕಾಣುವಿರಿ.