ಅನಾರೋಗ್ಯದಿಂದ ಬಳಲುತ್ತಿರುವ ನಟ ಶಿವರಾಜ್ ಕುಮಾರ್ ಶಸ್ತ್ರ ಚಿಕಿತ್ಸೆಗಾಗಿ ಬುಧವಾರ ಸಂಜೆ ಅಮೆರಿಕಗೆ ಪ್ರಯಾಣ ಬೆಳೆಸಿದ್ದಾರೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ಅಮೆರಿಕಗೆ ಪ್ರಯಾಣ ಬೆಳೆಸಿದ್ದ ಶಿವರಾಜ್ಕುಮಾರ್ಗೆ, ಪತ್ನಿ ಗೀತಾ ಶಿವರಾಜ್ಕುಮಾರ್, ಪುತ್ರಿ ನಿವೇದಿತಾ ಸಾಥ್ ನೀಡಿದರು.
ಡಿಸೆಂಬರ್ 24ರಂದು ಫ್ಲೋರಿಡಾ ರಾಜ್ಯದ ಮಿಯಾಮಿಯಲ್ಲಿರುವ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಆಸ್ಪತ್ರೆಯಲ್ಲಿ ಶಿವರಾಜ್ಕುಮಾರ್ ಅವರಿಗೆ ಸರ್ಜರಿ ನಡೆಯಲಿದೆ. ಡಾಕ್ಟರ್ ಮುರುಗೇಶ್ ನೇತೃತ್ವದಲ್ಲಿ ಶಸ್ತ್ರ ಚಿಕಿತ್ಸೆ ನಡೆಯಲಿದ್ದು ಬರೋಬ್ಬರಿ ಒಂದು ತಿಂಗಳು ಕಾಲ ಅಮೆರಿಕದಲ್ಲೇ ಶಿವರಾಜ್ಕುಮಾರ್ ಉಳಿದುಕೊಳ್ಳಲಿದ್ದಾರೆ.
ಜನವರಿ 25ರಂದು ಅಮೆರಿಕದಿಂದ ಶಿವರಾಜ್ಕುಮಾರ್ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಬೆಂಗಳೂರು ಬಿಡುವ ಮುನ್ನ ಭಾವುಕರಾದ ಶಿವಣ್ಣ ಒಂದು ತಿಂಗಳ ಕಾಲ ಭಾರತವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದರು. ಅಲ್ಲದೆ ಅಭಿಮಾನಿಗಳ ಪ್ರೀತಿ ಕಂಡು ಕಣ್ಣೀರು ಹಾಕಿದರು.
ಮಿಯಾಮಿ ಕ್ಯಾನ್ಸರ್ ಇನಿಸ್ಟಿಟ್ಯೂಟ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಶಿವರಾಜ್ ಕುಮಾರ್ ಅವರಿಗೆ ಅಲ್ಲಿ ಭಾರತ ಮೂಲದ ಮುರುಗೇಶ್ ನೇತೃತ್ವದ ತಜ್ಞವೈದ್ಯರ ತಂಡದಿಂದ ಚಿಕಿತ್ಸೆ ನಡೆಸಲಿದ್ದಾರೆ.
ಮಿಯಾಮಿ ಕ್ಯಾನ್ಸರ್ ಇನಿಸ್ಟಿಟ್ಯೂಟ್ ನೆಕ್ಷ್ಟ್ ಜನರೇಶನ್ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆಯಾಗಿದ್ದು, ವೈದ್ಯಕೀಯ ಆರೈಕೆ, ಸಂಶೋಧನೆ, ಹಾಗೂ ಆಧುನಿಕ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿದೆ.
ವಿಶ್ವಮಾನ್ಯತೆ ಪಡೆದ ಆಂಕೋಲಾಜಿಸ್ಟ್ಗಳೆಂದು ಕರೆಯಲಾಗುವ ತಜ್ಞ ವೈದ್ಯರ ತಂಡ ಇದೆ. ಇವರು ಜಗತ್ತಿನ ಉನ್ನತ ಕ್ಯಾನ್ಸರ್ ಕೇಂದ್ರಗಳಿಂದ ನೇಮಕಗೊಂಡ ವೈದ್ಯರುಗಳಾಗಿದ್ದು, ಇಲ್ಲಿ ಶಸ್ತ್ರ ಚಿಕಿತ್ಸೆಯಿಂದ ಗುಣವಾಗುವ ಪ್ರಮಾಣ ಹೆಚ್ಚಿದೆ. ಈ ಕಾರಣಕ್ಕೆ ಹಲವು ದೇಶಗಳಿಂದ ಚಿಕಿತ್ಸೆಗೆ ಇಲ್ಲಿಗೆ ಆಗಮಿಸುತ್ತಿದ್ದಾರೆ. ಅತ್ಯಾಧುನಿಕ ಸುಧಾರಿತ ಲೇಸರ್ ತಂತ್ರಜ್ಞಾನ ಒಂದೇ ಸ್ಥಳದಲ್ಲಿ ಲಭ್ಯವಿದ್ದು ಪ್ರತಿಯೊಂದು ವಿಧದ ಕ್ಯಾನ್ಸರ್ ಚಿಕಿತ್ಸೆಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಈ ಕಾರಣಕ್ಕೆ ಶಿವರಾಜ್ ಕುಮಾರ್ ಒಂದು ತಿಂಗಳುಗಳ ಕಾಲ ಅಲ್ಲೇ ಚಿಕಿತ್ಸೆ ಪಡೆದು ಬಳಿಕ ಭಾರತಕ್ಕೆ ಮರಳಲಿದ್ದಾರೆ.