ಬಳ್ಳಾರಿ: ತೃತೀಯ ಲಿಂಗಿಗಳೆಂದರೆ ಸಮಾಜ ನೋಡುವ ದೃಷ್ಟಿಕೋನವೇ ಬೇರೆ. ಸಮಾಜ ಅಷ್ಟೇ ಯಾಕೆ? ಹೆತ್ತವರು ಕೂಡ ಅವರನ್ನು ಮನೆಯಿಂದ ಹೊರ ಹಾಕಿದ ನಿದರ್ಶನಗಳೂ ಇವೆ. ಆದರೆ ಇಲ್ಲೊಬ್ಬ ಟ್ರಾನ್ಸ್ಜೆಂಡರ್ ಎಲ್ಲ ಸವಾಲು-ಸಂಕಷ್ಟಗಳನ್ನು ಮೆಟ್ಟಿ ನಿಂತು ಓದಿದ ವಿವಿಯಲ್ಲೇ ಪ್ರಾಧ್ಯಾಪಕಿಯಾಗಿ ಬೆರಗುಗೊಳಿಸಿದ್ದಾರೆ.ಈ ಕುರಿತು ಒಂದು ವರದಿ ಇಲ್ಲಿದೆ.. ತೃತೀಯ ಲಿಂಗಿ ಈಗ ಸ್ನಾತಕೋತ್ತರ ವಿದ್ಯಾರ್ಥಿಗಳ ಪ್ರಾಧ್ಯಾಪಕಿ…ರಾಜ್ಯದ ಮೊದಲ ತೃತೀಯ ಲಿಂಗಿ ಪ್ರಾಧ್ಯಾಪಕಿ..ಅಮಮಾನಗಳ ಮೆಟ್ಟಿ ನಿಂತ ತೃತೀಯ ಲಿಂಗಿ..ಹೌದು
ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದ ರೇಣುಕಾ ಪೂಜಾರಿ ಹೀಗೆ ಮೊದಲ ಬಾರಿಗೆ ವಿಶ್ವವಿದ್ಯಾಲಯ ಒಂದರಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಳ್ಳುವ ಮೂಲಕ ಸಮಾಜದಲ್ಲಿಯೇ ಮಾದರಿಯಾಗಿ ನಿಂತವರು. ಬಳ್ಳಾರಿಯ ವಿಜಯನಗರ ಶ್ರೀಕೃಷ್ಣ ದೇವಾರಯ ವಿಶ್ವವಿದ್ಯಾಲಯದ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಕಳೆದ ಐದು ದಿನಗಳ ಹಿಂದೆಯಷ್ಟೇ ಅರೆಕಾಲಿಕ ಕನ್ನಡ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದಾರೆ. ಹೀಗೆ ಪ್ರಾಧ್ಯಾಪಕಿ ಆಗುವ ಮೂಲಕ ಇಡೀ ರಾಜ್ಯದಲ್ಲಿ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧಕಿಯಾದಂತಾಗಿದೆ. ಈಕೆ ಹೀಗೆ ಪ್ರಾಧ್ಯಾಪಕಿ ಹುದ್ದೆಗೆ ಏರುವ ಹಿಂದೆ ಹಲವು ನೋವು-ಸಂಕಷ್ಟಗಳು ಅಡಗಿವೆ. ಅವರ ಹೆತ್ತವರ ಶ್ರಮವೂ ಇಲ್ಲಿ ಪ್ರತಿಫಲ ನೀಡಿದೆ.
Recruitment 2024: ಸುಪ್ರೀಂ ಕೋರ್ಟ್ʼನಲ್ಲಿದೆ ಉದ್ಯೋಗಾವಕಾಶ.! ಆಸಕ್ತರು ಇವತ್ತೇ ಅಪ್ಲೈ ಮಾಡಿ
ಕುರುಗೋಡು ಪಟ್ಟಣದ ಕೃಷಿಕರಾದ ಮಲ್ಲಯ್ಯ ಮತ್ತು ತಿಪ್ಪಮ್ಮ ಎನ್ನುವವರ ಪುತ್ರಿಯಾದ ರೇಣುಕಾ, ಹುಟ್ಟೂರಲ್ಲೇ ಪ್ರೌಢ ವ್ಯಾಸಂಗ ಮುಗಿಸಿದ್ದಾರೆ. ಬಳ್ಳಾರಿಯ ಮುನ್ಸಿಪಲ್ ಕಾಲೇಜಿನಲ್ಲಿ ಪಿಯು ಮುಗಿಸಿದ್ದಾರೆ. ಪುನಃ ಕುರುಗೋಡಿನ ಸರಕಾರಿ ಪದವಿ ಕಾಲೇಜಿನಲ್ಲಿ ಪ್ರವೇಶ ಪಡೆಯುವ ರೇಣುಕಾ ಪೂಜಾರಿಗೆ, ತನ್ನ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳ ಅರಿವು ಮೂಡುತ್ತದೆ. ಆವ-ಭಾವ, ನೈಸರ್ಗಿಕ ಪ್ರಕ್ರಿಯೆಗಳ ಬದಲಾವಣೆಗಳಿಂದ ತಾನು ಲಿಂಗ ಪರಿವರ್ತನೆಯಾಗುವುದು ಗೊತ್ತಾಗುತ್ತದೆ. ಜತೆಗಾರರ ಹಿಯಾಳಿಕೆ ಮಾತುಗಳು, ತನ್ನವರೇ ತನ್ನನ್ನು ನೋಡುವ ದೃಷ್ಟಿಯಿಂದ ಹಿಂಜರಿಕೆಯಿಂದಲೇ ೨೦೧೮ರಲ್ಲಿ ಪದವಿ ಮುಗಿಸುವ ರೇಣುಕಾ, ಮುಂದಿನ ವ್ಯಾಸಂಗ ಮಾಡಲು ಆಗದೇ ಮನೆಯಲ್ಲಿಯೇ ಉಳಿದುಕೊಳ್ಳುತ್ತಾರೆ. ೨೦೧೯-೨೦ ಎರಡು ವರ್ಷವೂ ಯಾವುದೇ ಓದು-ಬರಹ ಬೇಡವೆಂದು ಮನೆ-ಜಮೀನು ಕೆಲಸದಲ್ಲಿ ರೇಣುಕಾ ಪೂಜಾರಿ ತೊಡಗಿಕೊಳ್ಳುತ್ತಾರೆ.
ರೇಣುಕಾ ಪೂಜಾರಿ ಮಂಗಳಮುಖಿಯಾಗಿ ಬದಲಾಗುವ ಹೊತ್ತಿಗೆ ಕೋವಿಡ್ನ ಎರಡನೇ ಅಲೆ ಉಂಟಾಗುತ್ತದೆ. ಈ ಕೋವಿಡ್-೧೯ ಹಲವರ ಬಾಳಿಗೆ ಕೊಳ್ಳೆ ಇಟ್ಟಿದೆ. ಸಾವಿರಾರು ಜನರ ಪ್ರಾಣವನ್ನೇ ತೆಗೆಯಿತು. ಎಷ್ಟೋ ಜನರು ಅನಾಥವಾದರೆ ಆದರೆ ರೇಣುಕಾ ಪಾಲಿಗೆ ಕೋವಿಡ್ ದಿನಗಳೇ ಬೆಳಕಾದವು. ಪಿಜಿ ಅಧ್ಯಯನವೇ ಬೇಡವೆಂದುಕೊಂಡಿದ್ದ ರೇಣುಕಾಗೆ ಕೋವಿಡ್ ದಿನಗಳೇ ಪಿಜಿ ವ್ಯಾಸಂಗಕ್ಕೆ ಪ್ರೋತ್ಸಾಹ ನೀಡಿದವು ಎನ್ನುತ್ತಾರೆ. ಕೋವಿಡ್ ಕಾಲದಲ್ಲಿಯೇ ‘ನಾನು ಪಿಜಿಗೆ ಅಡ್ಮಿಶನ್ ಮಾಡಿಸಿದೆ. ಆನ್ಲೈನ್ ಕ್ಲಾಸ್ನಲ್ಲೂ ಅಟೆಂಡ್ ಆದೆ. ಕೊನೆಗೆ ಎಲ್ಲ ಹಿಂಜರಿಕೆ ತೊರೆದು ಕ್ಲಾಸ್ಗೂ ಅಟೆಂಡ್ ಆಗಿ ಎಂಎ ಕನ್ನಡ ಪೂರೈಸಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಪಿಜಿ ಮುಕ್ತಾಯದ ಬಳಿಕವೂ ಎರಡು ವರ್ಷ ಖಾಲಿಯೇ ಇದ್ದ ರೇಣುಕಾ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿಕೊಂಡಿದ್ದರು. ಆದರೆ ವಿವಿಯ ಕುಲಸಚಿವ ರುದ್ರೇಶ ಅವರ ಪ್ರೋತ್ಸಾಹದ ಮೇರೆಗೆ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಅರೆಕಾಲಿಕ ಪ್ರಾಧ್ಯಪಕಿ ಹುದ್ದೆಗೆ ಅರ್ಜಿ ಸಲ್ಲಿಸಿ ನೇಮಕಗೊಂಡಿದ್ದಾರೆ.ವಿಎಸ್ಕೆವಿವಿಯು ನೇಮಕಾತಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಶೇ ೧ರ ಮೀಸಲಾತಿಯನ್ನು ಪಾಲಿಸುತ್ತಿದ್ದು, ಇದರ ಅನ್ವಯ ರೇಣುಕಾ ಪೂಜಾರಿ ಆಯ್ಕೆಯಾಗಿದ್ದಾರೆ. ಸಂಡೂರಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಅತಿಥಿ ಉಪನ್ಯಾಸಕರಾಗಿ ಡಿ.೧೦ ರಿಂದ ಕರ್ತವ್ಯಕ್ಕೆ ರೇಣುಕಾ ಹಾಜರಾಗಿದ್ದಾರೆ.
ಇತ್ತೀಚೆಗೆ ಮಂಗಳಮುಖಿಯರು ಎಲ್ಲ ರಂಗದಲ್ಲೂ ಪ್ರವೇಶಿಸಿದ್ದಾರೆ. ಶಿಕ್ಷಣ ರಂಗದಲ್ಲಿ ಇದುವರೆಗೆ ಪ್ರಾಥಮಿಕ, ಪ್ರೌಢ ವಿಭಾಗದಲ್ಲಿ ಶಿಕ್ಷಕಿಯರು ಆಗಿರುವ ಉದಾಹರಣೆಗಳಿವೆ. ಆದರೆ ಕುರುಗೋಡಿನ ರೇಣುಕಾ ಸ್ನಾತಕೋತ್ತರ ವಿಭಾಗದಲ್ಲಿಯೇ ಪ್ರಾಧ್ಯಾಪಕಿಯಾಗಿದ್ದು, ಪಿಎಚ್ಡಿ ಪದವಿ ಹೊಂದುವ ಆಸೆಯೂ ಹೊಂದಿದ್ದಾರೆ. ತೃತೀಯ ಲಿಂಗಗಳನ್ನು ಸಮಾಜ ನೋಡುವ ದೃಷ್ಟಿಕೋನವೇ ಬೇರೆ.ಆದರೆ ನಾವು ಎಲ್ಲರಂತೆ ಎಲ್ಲಾ ರಂಗಗಳಲ್ಲಿ ಸಾಧನೆ ಮಾಡಬಹುದು ಅನ್ನೋದನ್ನು ರೇಣುಕಾ ಪೂಜಾರಿ ತೋರಿಸಿಕೊಟ್ಟಿದ್ದಾರೆ.ಆ ಮೂಲಕ ಇತರ ತೃತೀಯ ಲಿಂಗಿಗಳಿಗೂ ರೇಣುಕಾ ಪೂಜಾರಿ ಮಾದರಿಯಾಗಿದ್ದಾರೆ.