ಬೆಳಗಾವಿ:- ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ಇರುವುದು ಸತ್ಯ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
ವಿಧಾನಪರಿಷತ್ನಲ್ಲಿ ಮಾತನಾಡುವ ವೇಳೆ, ಕಂದಾಯ ಮತ್ತು ಭೂಮಾಪನ ಇಲಾಖೆಯಲ್ಲಿ ಕೆಳ ಹಂತದಲ್ಲಿ ಭ್ರಷ್ಟಾಚಾರ ನಡೆಯುಯತ್ತಿರುವುದು ನಿಜ ಎಂದರು.
ಕೆಳಮಟ್ಟದಲ್ಲಿ ಭ್ರಷ್ಟಾಚಾರ ತಡೆಯುವುದು ಸುಲಭವಲ್ಲ. ಇದು ಹಿಂದೆಯೂ ಇತ್ತು ಮತ್ತು ಈಗಲೂ ಮುಂದುವರಿಯುತ್ತಿದೆ. ಆದರೆ ನಾವು ಅದನ್ನು ತಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದರು.
ಇ-ಖಾತಾ ಅಳವಡಿಕೆ ಕುರಿತು ಬಿಜೆಪಿ ಎಂಎಲ್ಸಿ ಶಶಿಲ್ ನಮೋಶಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೃಷ್ಣಬೈರೇಗೌಡ, ನಾನು ಅಕ್ರಮಗಳನ್ನು ತಡೆಯಲು ಬಂದಿದ್ದೇನೆಯೇ ಹೊರತು ಭ್ರಷ್ಟಾಚಾರವನ್ನು ಬೆಂಬಲಿಸಲು ಅಲ್ಲ. ನಕಲಿ ದಾಖಲೆಗಳನ್ನು ತಯಾರಿಸಿ ನೋಂದಣಿಗೆ 40 ರಿಂದ 50 ಸಾವಿರ ರೂ. ವಿಧಿಸುವುದನ್ನು ಬೆಂಬಲಿಸಬೇಕೆಂದು ನೀವು ಬಯಸುತ್ತೀರಾ ಎಂದು ಮರು ಪ್ರಶ್ನೆ ಮಾಡಿದ್ದಾರೆ
ಇ-ಖಾತಾವನ್ನು ವಿರೋಧಿಸುವ ಸದನದ ಸದಸ್ಯರು ಸರ್ಕಾರವು ಅಕ್ರಮವಾಗಿ ಆದಾಯವನ್ನು ಗಳಿಸಬೇಕೆಂದು ಬಯಸುತ್ತಾರೆಯೇ ಎಂದು ಸಚಿವರು ಪ್ರಶ್ನಿಸಿದ್ದಾರೆ. ಇ-ಖಾತಾ ಜಾರಿಗೆ ಬಂದಾಗ ಆರಂಭದಲ್ಲಿ ಅನಾನುಕೂಲತೆಗಳಿದ್ದವು ಎಂಬ ಅಂಶವನ್ನು ಒಪ್ಪಿಕೊಂಡ ಕೃಷ್ಣಬೈರೇಗೌಡ, ಶೇ 90ರಷ್ಟು ಸಮಸ್ಯೆ ಬಗೆಹರಿದಿದೆ ಎಂದು ಸದನಕ್ಕೆ ತಿಳಿಸಿದ್ದಾರೆ.