ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಪ್ರಮುಖ ಆರೋಪಿಗಳಾದ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಅವರಿಗೆ ಜಾಮೀನು ಸಿಕ್ಕಿದೆ. ಇದೇ ವೇಳೆ ಅನುಕುಮಾರ್, ಜಗದೀಶ್, ನಾಗರಾಜು, ಲಕ್ಷ್ಮಣ್ ಮತ್ತು ಪ್ರದೋಷ್ ಅವರಿಗೂ ಜಾಮೀನು ಸಿಕ್ಕಿತ್ತು. ಬೇಲ್ ಮೇಲೆ ದರ್ಶನ್ ಮತ್ತು ಪವಿತ್ರಾ ಗೌಡ ಹೊರಬಂದಿದ್ದಾರೆ. ಆದರೆ ಜಗದೀಶ್ ಮತ್ತು ಅನುಕುಮಾರ್ ಅವರಿಗೆ ಜಾಮೀನಿಗೆ ಶ್ಯೂರಿಟಿ ಒದಗಿಸುವುದೇ ಸಮಸ್ಯೆ ಆಗಿತ್ತು. ಇದೀಗ ಆರೋಪಿ ಜಗದೀಶ್ಗೆ ಕೊನೆಗೂ ಶ್ಯೂರಿಟಿ ಸಿಕ್ಕಿದ್ದು, ಶಿವಮೊಗ್ಗ ಜೈಲಿಂದ ಬಿಡುಗಡೆ ಆಗಿದ್ದಾನೆ.
ರೇಣುಕಾಸ್ವಾಮಿ ಕೇಸ್ನಲ್ಲಿ 6ನೇ ಆರೋಪಿ ಆಗಿದ್ದ ಜಗದೀಶ್ ನನ್ನು ಶಿವಮೊಗ್ಗ ಸೋಗಾನೆಯ ಕೇಂದ್ರ ಕಾರಾಗೃಹದಿಂದ ರಿಲೀಸ್ ಮಾಡಲಾಗಿದೆ. ಜಾಮೀನು ಸಿಕ್ಕಿ 6 ದಿನಗಳ ಬಳಿಕ ಜಗದೀಶ್ ಹೊರಗೆ ಬಂದಿದ್ದಾರೆ. ಜಗದೀಶ್ ಗೆ ಶ್ಯೂರಿಟಿ ಸಿಗದ ಹಿನ್ನೆಲೆ ಬಿಡುಗಡೆ ವಿಳಂಬವಾಗಿತ್ತು.
ಎ6 ಆಗಿದ್ದ ಜಗದೀಶ್ ನನ್ನು ಆಗಸ್ಟ್ 29ರಂದು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿತ್ತು. ಚಿತ್ರದುರ್ಗದ ಆಟೋ ಡ್ರೈವರ್ ಜಗದೀಶ್, ರೇಣುಕಾಸ್ವಾಮಿ ಕೊಲೆಯಲ್ಲಿ ಭಾಗಿಯಾಗಿದ್ರು ಎನ್ನಲಾಗ್ತಿದೆ. ಜೈಲಿಂದ ರಿಲೀಸ್ ಆದ ಜಗದೀಶ್ನನ್ನು ಆತನ ಸಹೋದರಿ ಕಾರಿನಲ್ಲಿ ಕರೆದೊಯ್ದು. ರಿಲೀಸ್ ಆದ ಜಗದೀಶ್, ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ನನ್ನ ಮಗನಿಗೆ ಜಾಮೀನು ಸಿಕ್ಕಿದ್ರೂ ಜೈಲಿಂದ ಹೊರಗೆ ಬರಲು ಆಗ್ತಿಲ್ಲ. ಯಾರೂ ಶ್ಯೂರಿಟಿ ಕೊಡ್ತಿಲ್ಲ ಎಂದು ಜಗದೀಶ್ ತಾಯಿ ಸುಲೋಚನಮ್ಮ ಕಣ್ಣೀರು ಹಾಕಿದ್ದರು. ಇಡೀ ದಿನ ನಮ್ಮ ಸಂಬಂಧಿಕರ ಮನೆ ಮನೆಗೆ ಹೋಗಿ ಕೇಳಿಕೊಂಡ್ವಿ. ಜಾಮೀನಿಗೆ ಯಾರು ಶ್ಯೂರಿಟಿ ಹಾಕಲು ಮುಂದೆ ಬರುತ್ತಿಲ್ಲ ಈಗ ದರ್ಶನ್ ಅವರೇ ನಮ್ಮ ಸಹಾಯಕ್ಕೆ ಬರಬೇಕು ಎಂದು ಜಗದೀಶ್ ತಾಯಿ ಮನವಿ ಮಾಡಿದ್ದರು. ಇದೀಗ ಜಗದೀಶ್ ಕೂಡ ಜಾಮೀನಿನ ಮೂಲಕ ಹೊರ ಬಂದಿದ್ದಾರೆ.