ಎಲ್ಲಾ ಕಾಲದಲ್ಲೂ ದೊರೆಯುವ ಹಣ್ಣು ಎಂದರೆ ಬಾಳೆ ಹಣ್ಣು. ಕೈಗೆಟಕುವ ದರದಲ್ಲಿ ಸಿಗುವ ಬಾಳೆ ಹಣ್ಣು ಕಬ್ಬಿಣಂಶ, ಪ್ರೋಟೀನ್, ಪೊಟಾಷಿಯಮ್, ಲವಣ ಸೇರಿದಂತೆ ವಿವಿಧ ಬಗೆಯ ಆರೋಗ್ಯಕರ ಗುಣಗಳನ್ನು ಒಳಗೊಂಡಿರುತ್ತದೆ. ಒಂದು ಬಾಳೆಹಣ್ಣು ಸೇವಿಸುವುದರಿಂದ ತಾತ್ಕಾಲಿಕವಾಗಿ ಹಸಿವೆಯನ್ನು ತಡೆಯಬಹುದು. ಜೊತೆಗೆ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಔಷಧ ರೂಪದಲ್ಲಿ ಆರೈಕೆ ಮಾಡುವುದು. ಆದ್ರೆ ಬಾಳೆಹಣ್ಣನ್ನು ಬೇರಾವ ವಸ್ತುಗಳೊಂದಿಗೆ ಅಥವಾ ಇತರ ಹಣ್ಣುಗಳೊಂದಿಗೆ ಮಿಶ್ರಗೊಳಿಸಬಾರದು ಎಂಬುದು ತಜ್ಞರ ಸಲಹೆಯಾಗಿದೆ.
ಹಾಗಾದರೆ ಅಂತಹ ಆಹಾರಗಳು ಯಾವುವು
ಹಾಲು ಹಾಗೂ ಡೈರಿ ಉತ್ಪನ್ನಗಳು
ಬಾಳೆಹಣ್ಣುಗಳಲ್ಲಿ ನೈಸರ್ಗಿಕ ಅಂಶಗಳು ಹೇರಳವಾಗಿದ್ದು ಇದು ಪ್ರೋಟೀನ್, ಫೈಬರ್, ಮೆಗ್ನೇಸಿಯಮ್, ರಂಜಕ, ಪೊಟ್ಯಾಸಿಯಮ್, ವಿಟಮಿನ್ ಬಿ ಯಂತಹ ಖನಿಜಗಳಿಂದ ತುಂಬಿದೆ.
ಹಾಗಾಗಿಯೇ ಇದನ್ನು ಸೇವಿಸದೊಡನೆ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ. ಹಾಲು ಹಾಗೂ ಇನ್ನಿತರ ಡೈರಿ ಉತ್ಪನ್ನಗಳಲ್ಲಿ ಕೊಬ್ಬು ಅಧಿಕ ಪ್ರಮಾಣದಲ್ಲಿರುತ್ತವೆ ಹಾಗಾಗಿ ಬಾಳೆಹಣ್ಣನ್ನು ಇವುಗಳೊಂದಿಗೆ ಸಂಯೋಜಿಸಿಕೊಂಡು ಸೇವಿಸುವುದರಿಂದ ಜೀರ್ಣಕ್ರಿಯೆಗೆ ಅಪಾಯಕಾರಿ ಎಂದೆನಿಸುತ್ತದೆ. ಇದರಿಂದ ಹೊಟ್ಟೆಯುಬ್ಬರ ಹಾಗೂ ಇನ್ನಿತರ ಅಸ್ವಸ್ಥತೆಗಳು ಉಂಟಾಗಬಹುದು
ಹಾಗಾಗಿ ಬಾಳೆಹಣ್ಣು ಹಾಗೂ ಹಾಲನ್ನು ಇನ್ನು ಮುಂದೆ ಜೊತೆಯಾಗಿ ಸೇವಿಸುವಾಗ ಕೊಂಚ ಎಚ್ಚರವಾಗಿರಿ. ಒಂದಾ ಬಾಳೆಹಣ್ಣು ಸೇವಿಸಿ ಸ್ವಲ್ಪ ಹೊತ್ತಿನ ಬಳಿಕ ಹಾಲು ಸೇವಿಸಿ.
ಹೆಚ್ಚು ಪ್ರೋಟೀನ್ ಇರುವ ಆಹಾರಗಳು
ಹೆಚ್ಚಿನವರು ಪ್ರೋಟೀನ್ ಭರಿತ ಆಹಾರಗಳನ್ನೇ ತಮ್ಮ ನಿತ್ಯದ ಡಯೆಟ್ನಲ್ಲಿ ಸೇವಿಸುತ್ತಾರೆ. ಮಾಂಸ ಇಲ್ಲವೇ ಮೊಟ್ಟೆಯೊಂದಿಗೆ ಬಾಳೆಹಣ್ಣನ್ನು ಸೇವಿಸುವುದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.
ತ್ವರಿತವಾಗಿ ಜೀರ್ಣವಾಗುವ ಬಾಳೆಹಣ್ಣನ್ನು ನಿಧಾನವಾಗಿ ಜೀರ್ಣವಾಗುವ ಪ್ರೋಟೀನ್ ಆಹಾರಗಳೊಂದಿಗೆ ಸೇವಿಸಿದಾಗ ಇದು ಗ್ಯಾಸ್ ಅನ್ನು ಉಂಟುಮಾಡಬಹುದು.
ಸಂಸ್ಕರಿಸಿದ ಕಾರ್ಬ್ಗಳು
ಸಕ್ಕರೆ ಹಾಗೂ ಬೇಯಿಸಿದ, ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಆಹಾರಗಳೊಂದಿಗೆ ಬಾಳೆಹಣ್ಣಿನ ಸೇವನೆ ಕೂಡ ನಿಮ್ಮ ದೇಹದಲ್ಲಿ ಅಸ್ವಸ್ಥತೆಗೆ ಕಾರಣವಾಗಬಹುದು.
ಇದರಿಂದ ರಕ್ತದ ಸಕ್ಕರೆಮಟ್ಟದಲ್ಲಿ ಕುಸಿತ ಉಂಟಾಗಬಹುದು. ಸೇವಿಸಿದ ಸ್ವಲ್ಪ ಹೊತ್ತಿನ ಬಳಿಕ ಆಯಾಸ ಹಾಗೂ ಹೆಚ್ಚು ಹಸಿವು ಕಾಣಿಸಿಕೊಳ್ಳಬಹುದು. ಇನ್ನು ಕೆಲವರಿಗೆ ಹಲವಾರು ಅಸ್ವಸ್ಥೆಗಳನ್ನುಂಟು ಮಾಡಬಹುದು ಎಂದು ತಜ್ಞರು ತಿಳಿಸುತ್ತಾರೆ.
ಬಾಳೆಕಾಯಿ
ಇದು ವಿಚಿತ್ರವಾದರೂ ಸತ್ಯವಾದ ಅಂಶವಾಗಿದ್ದು ಮಾಗಿದ ಬಾಳೆಹಣ್ಣುಗಳು ಸಾಮಾನ್ಯವಾಗಿ ಬೇಗನೇ ಜೀರ್ಣವಾಗುತ್ತವೆ ಆದರೆ ನೀವು ಹಣ್ಣಾದ ಬಾಳೆಹಣ್ಣನ್ನು ಕಾಯಿ ಇಲ್ಲವೇ ಬಲಿಯದ ಹಣ್ಣುಗಳೊಂದಿಗೆ ಸೇವಿಸುವುದು ಜೀರ್ಣಕ್ರಿಯೆಯಲ್ಲಿ ಏರುಪೇರುಗಳನ್ನುಂಟು ಮಾಡಬಹುದು ಎಂಬುದು ತಜ್ಞರ ಸಲಹೆಯಾಗಿದೆ.
ಬಾಳೆಕಾಯಿ ಹೆಚ್ಚು ನಿರೋಧಕ ಪಿಷ್ಟವನ್ನು ಹೊಂದಿರುತ್ತವೆ ಹಾಗಾಗಿ ಇದು ಜೀರ್ಣಕ್ರಿಯೆಗೆ ಅಡ್ಡಿ ಎಂದೆನಿಸುತ್ತದೆ. ಇದರಿಂದ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿಯಾಗಿ ಹೊಟ್ಟೆಯುಬ್ಬರ ಮೊದಲಾದ ಸಮಸ್ಯೆಗಳು ಕಂಡುಬರಬಹುದು.
ಸಿಟ್ರಸ್ ಹಣ್ಣುಗಳೊಂದಿಗೆ ಸೇವಿಸುವುದು
ಲಿಂಬೆ, ಕಿತ್ತಳೆ, ಮೂಸಂಬಿ, ಗ್ರೇಪ್ಫ್ರುಟ್ಸ್ ಮೊದಲಾದ ಸಿಟ್ರಸ್ ಹಣ್ಣುಗಳೊಂದಿಗೆ ಬಾಳೆಹಣ್ಣಿನ ಸೇವನೆಯು ಅನೇಕರಿಗೆ ನಾನಾ ರೀತಿಯ ಅಸ್ವಸ್ಥತೆಯನ್ನುಂಟು ಮಾಡಬಹುದು.
ಬಾಳೆಹಣ್ಣು ಹಾಗೂ ಸಿಟ್ರಸ್ ಹಣ್ಣುಗಳೆರಡೂ ಅಸಿಡಿಕ್ ಅಂಶಗಳನ್ನು ಒಳಗೊಂಡಿರುವುದಾಗಿದೆ ಹಾಗಾಗಿ ಇವುಗಳನ್ನು ಜೊತೆಯಾಗಿ ಸೇವಿಸುವುದು ಹೊಟ್ಟೆಯಲ್ಲಿ ಅನೇಕ ಸಮಸ್ಯೆಗಳನ್ನುಂಟು ಮಾಡಬಹುದು.