ಉಪೇಂದ್ರ ನಟನೆಯ ಬಹುನಿರೀಕ್ಷಿತ ‘ಯುಐ’ ಸಿನಿಮಾ ಬಿಡುಗಡೆಗೆ ಇನ್ನೊಂದು ದಿನ ಮಾತ್ರವೇ ಭಾಕಿ ಇದೆ. ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆ ಇದ್ದು ಸಿನಿಮಾ ಭಿನ್ನವಾಗಿ ಬರಲಿದೆ ಎಂಬ ಸ್ಪಷ್ಟ ಚಿತ್ರಣ ಸಿಕ್ಕಿದೆ. ಈ ಮಧ್ಯೆ ‘ಯುಐ’ ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಸಾಕಷ್ಟು ವದಂತಿ ಹಬಿದ್ದು ಇದಕ್ಕೆ ನಟ ಉಪೇಂದ್ರ ಸ್ಪಷ್ಟನೆ ನೀಡಿದ್ದಾರೆ.
‘ಯುಐ’ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಯಿದ್ದು ಟ್ರೇಲರ್ ನೋಡಿ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ. ಉಪೇಂದ್ರ ಅವರ ಸಿನಿಮಾದಲ್ಲಿ ಏನೆಲ್ಲ ಇರಬಹುದು ಎಂದು ಊಹಿಸಿಕೊಂಡು ತಲೆಕೆರೆದುಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಚಿತ್ರದ ಬಗ್ಗೆ ವದಂತಿ ಹಬ್ಬಿಸಿದ್ದರು.
‘ಯಐ ಚಿತ್ರಕ್ಕೆ ಎರಡು ಕ್ಲೈಮ್ಯಾಕ್ಸ್ ಇರಲಿದ್ದು, ಒಂದೊಂದು ಥಿಯೇಟರ್ನಲ್ಲಿ ಒಂದೊಂದು ಕ್ಲೈಮ್ಯಾಕ್ಸ್ ಬಿತ್ತರ ಆಗಲಿದೆ. ಪ್ರೇಕ್ಷಕರಿಗೆ ಬೇರೆ ಬೇರೆಯದೇ ಆದ ಕ್ಲೈಮ್ಯಾಕ್ಸ್ ನೋಡ ಸಿಗಲಿದೆ’ ಎನ್ನುವ ವದಂತಿ ಇತ್ತು. ಇದು ಅಸಾಧ್ಯ ಎಂಬ ಮಾತನ್ನು ಉಪೇಂದ್ರ ಹೇಳಿದ್ದಾರೆ.
‘ಎರಡು ಕ್ಲೈಮ್ಯಾಕ್ಸ್ ಎಂಬ ವಿಚಾರದಲ್ಲಿ ಯಾವುದೇ ಸತ್ಯ ಇಲ್ಲ. ಸಿನಿಮಾಗೆ ಒಂದೇ ಕ್ಲೈಮ್ಯಾಕ್ಸ್ ಇದೆ. ಕಂಟೆಂಟ್ ಉತ್ತಮವಾಗಿದೆ. ಹೀಗಾಗಿ, ನೀವು ಸಿನಿಮಾನ ಎರಡು ಬಾರಿ ನೋಡಬೇಕು ಎಂದನಿಸುತ್ತದೆ’ ಎಂದು ಉಪೇಂದ್ರ ಹೇಳಿದ್ದಾರೆ. ಉಪ್ಪಿ ಯಾವಾಗಲೂ ಭಿನ್ನ ಸಿನಿಮಾಗಳನ್ನು ಮಾಡುತ್ತಾರೆ. ಈ ಕಾರಣಕ್ಕೆ ಇದು ನಿಜ ಇದ್ದರೂ ಇರಬಹುದು ಎಂದು ಅನೇಕರು ಭಾವಿಸಿದ್ದರು. ಆದರೆ, ಅದು ಸುಳ್ಳಾಗಿದೆ.
ಓಪನಿಂಗ್ ದೃಶ್ಯ ಹೇಗಿರುತ್ತದೆ ಎಂಬ ಬಗ್ಗೆಯೂ ಅವರು ಹಿಂಟ್ ಕೊಟ್ಟಿದ್ದಾರೆ. ‘ಓಪನಿಂಗ್ ದೃಶ್ಯವೇ ಪ್ರೇಕ್ಷಕರಿಗೆ ಶಾಕಿಂಗ್ ಆಗಿರಲಿದೆ’ ಎಂದು ಉಪೇಂದ್ರ ಭವಿಷ್ಯ ನುಡಿದಿದ್ದಾರೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಓಪನಿಂಗ್ ಯಾವ ರೀತಿಯಲ್ಲಿ ಇರಬಹುದು ಎಂಬ ಕುತೂಹಲ ಜೋರಾಗಿದೆ.
‘ಯುಐ’ ಸಿನಿಮಾ ಪ್ರಚಾರಕ್ಕಾಗಿ ಉಪೇಂದ್ರ ಅವರು ನಾನಾ ಕಡೆಗಳಿಗೆ ತೆರಳುತ್ತಿದ್ದಾರೆ. ಈ ಸಿನಿಮಾ ಕನ್ನಡ ಮಾತ್ರವಲ್ಲದೆ ಪರಭಾಷೆಗಳಿಗೂ ಡಬ್ ಆಗಿ ರಿಲೀಸ್ ಆಗುತ್ತಿದೆ. ಸಾಕಷ್ಟು ನಿರೀಕ್ಷೆ ಮೂಡಿಸುರುವ ಯುಐ ಸಿನಿಮಾ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.