ಖ್ಯಾತ ನಿರ್ದೇಶಕರ ಸಾಲಿನಲ್ಲಿ ಅಟ್ಲಿ ಕೂಡ ಒಬ್ಬರು. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸುತ್ತಿರುವ ಅಟ್ಲಿ ಸದ್ಯ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಅಟ್ಲಿ ಅವರ ದೇಹದ ಬಣ್ಣದ ಬಗ್ಗೆ ಕಪಿಲ್ ಶರ್ಮಾ ಟೀಕೆ ಮಾಡಿದ್ದು ಇದಕ್ಕೆ ನಗದೆ ಅಟ್ಲಿ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ.
ಅಟ್ಲಿ ಅವರು ಇತ್ತೀಚೆಗೆ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ಗೆ ಆಗಮಿಸಿದ್ದರು. ಈ ವೇಳೆ ಪ್ರಶ್ನೆ ಕೇಳುವ ಭರದಲ್ಲಿ ಕಪಿಲ್ ಅವರು ಒಂದು ಎಡವಟ್ಟು ಮಾಡಿಕೊಂಡಿದ್ದಾರೆ. ‘ಯಾವುದಾದರೂ ಸ್ಟಾರ್ನ ಮೊದಲ ಬಾರಿ ಭೇಟಿ ಮಾಡಲು ಹೋದಾಗ ಅಟ್ಲಿ ಎಲ್ಲಿ ಎಂದು ಕೇಳಿದ ಉದಾಹರಣೆ ಇದೆಯೇ’ ಎಂದು ಕೇಳುತ್ತ ನಕ್ಕರು ಕಪಿಲ್ ಶರ್ಮಾ. ಆದರೆ, ಅಟ್ಲಿ ನಗಲಿಲ್ಲ.
‘ನೀವು ಯಾವ ಅರ್ಥದಲ್ಲಿ ಪ್ರಶ್ನೆ ಕೇಳಿದಿರಿ ಎಂಬುದು ನನಗೆ ಅರ್ಥವಾಯಿತು. ನಾನು ಉತ್ತರಿಸಲು ಪ್ರಯತ್ನಿಸುತ್ತೇನೆ. ನಾನು ಎಆರ್ ಮುರುಗದಾಸ್ಗೆ ಧನ್ಯವಾದ ಹೇಳಬೇಕು. ಅವರೇ ನನ್ನ ಮೊದಲ ಸಿನಿಮಾನ ನಿರ್ಮಾಣ ಮಾಡಿದ್ದು. ಅವರು ಸ್ಕ್ರಿಪ್ಟ್ ಕೇಳಿದರು. ನಾನು ಹೇಗಿದ್ದೇನೆ ಎಂದು ನೋಡಿಲ್ಲ. ಅವರು ನನ್ನ ಸ್ಕ್ರಿಪ್ಟ್ ನರೇಷನ್ ಕೇಳಿ ಇಷ್ಟಪಟ್ಟರು. ನಾವು ಹೇಗೆ ಕಾಣುತ್ತೇವೆ ಎಂಬುದರ ಮೇಲೆ ಜಡ್ಜ್ ಮಾಡಬಾರದು. ನಮ್ಮ ಮನಸ್ಸನ್ನು ನೋಡಿ ಜಡ್ಜ್ ಮಾಡಬೇಕು’ ಎಂದು ಅಟ್ಲಿ ಹೇಳಿದ್ದಾರೆ.
ಅನೇಕರು ಈ ವಿಡಿಯೋನ ಶೇರ್ ಮಾಡಿದ್ದು, ಕಪಿಲ್ ಶರ್ಮಾ ಕೇಳಿದ ಪ್ರಶ್ನೆಯನ್ನು ಅನೇಕರು ಟೀಕೆ ಮಾಡಿದ್ದಾರೆ. ಅಟ್ಲಿ ಅವರ ಬಣ್ಣ ನೋಡಿ ಈ ರೀತಿಯಲ್ಲಿ ಟೀಕೆ ಮಾಡೋದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು, ‘ಕಪಿಲ್ ಶರ್ಮಾ ಕಡೆಯಿಂದ ಈ ರೀತಿಯ ಪ್ರಶ್ನೆಗಳು ಬರುತ್ತವೆ ಎಂದಾಗ ಅದರಲ್ಲಿ ಅಚ್ಚರಿ ಏನಿಲ್ಲ’ ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ಕಮಿಲ್ ಶರ್ಮಾ ಅಟ್ಲಿ ಅವರ ಕ್ಷಮೆ ಕೇಳಬೇಕು ಎಂದು ಹಲವರು ಆಗ್ರಹಿಸಿದ್ದಾರೆ.