ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಕಳೆದ 11 ವರ್ಷಗಳಿಂದ ಬಿಗ್ ಬಾಸ್ ಕಾರ್ಯಕ್ರಮ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಉಳಿದ ಭಾಷೆಗಳಲ್ಲಿ ಹಲವು ಬಿಗ್ ಬಾಸ್ ನಿರೂಪಕರು ಬದಲಾಗಿದ್ದಾರೆ. ಆದ್ರೆ ಕನ್ನಡದಲ್ಲಿ ಮಾತ್ರ ಕಳೆದ 11 ಸೀಸನ್ ಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದ ಕೀರ್ತಿ ಸುದೀಪ್ ಅವರಿಗೆ ಸಲ್ಲುತ್ತದೆ. ಆದರೆ ಇದು ಸುದೀಪ್ ಅವರ ಕೊನೆಯ ಬಿಗ್ ಬಾಸ್ ಶೋ. ಮುಂದಿನ ಸೀಸನ್ ನಿಂದ ತಾವು ನಿರೂಪಣೆ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಈ ಬಗ್ಗೆ ಹಲವು ಊಹಾಪೋಹಗಳು ಹುಟ್ಟಿಕೊಂಡಿದ್ದವು. ಇದೀಗ ಸ್ವತಃ ಸುದೀಪ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಸಿನಿಮಾಗಳ ಶೂಟಿಂಗ್ ಮಧ್ಯದಲ್ಲಿ ಬಿಗ್ ಬಾಸ್ ನಿರೂಪಣೆಗೆ ಸಮಯ ಹೊಂದಿಸಿಕೊಳ್ಳುವುದು ತುಂಬ ಕಷ್ಟ. ಆ ಕಾರಣದಿಂದಲೇ ತಾವು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಸುದೀಪ್ ತಿಳಿಸಿದ್ದಾರೆ.
ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಡಿಸೆಂಬರ್ 25ರಂದು ಬಿಡುಗಡೆ ಆಗಲಿದೆ. ಈ ಪ್ರಯುಕ್ತ ಅವರು ಸಂದರ್ಶನ ನೀಡಿದ್ದು, ಈ ವೇಳೆ ಬಿಗ್ ಬಾಸ್ ನಿರೂಪಣೆಯ ಬಗ್ಗೆಯೂ ಪ್ರಶ್ನೆ ಎದುರಾಗಿದೆ. ತಾವು ಬಿಗ್ ಬಾಸ್ ನಿರೂಪಣೆಗೆ ವಿದಾಯ ಹೇಳಿದ್ದಕ್ಕೆ ನಿಜವಾದ ಕಾರಣ ಏನು ಎಂಬುದನ್ನು ಸುದೀಪ್ ರಿವೀಲ್ ಮಾಡಿದ್ದಾರೆ.
‘ಸಾಕು, ಎಷ್ಟು ಮಾಡುವುದು? ಎಲ್ಲರನ್ನೂ ರಿಪೇರಿ ಮಾಡುತ್ತಾ ಕುಳಿತುಕೊಳ್ಳಲು ಬಂದಿದ್ದೀನಾ ನಾನು? ಬೇರೆ ಕೆಲಸಗಳು ಇರುತ್ತವೆ. ತುಂಬ ಶ್ರಮ ಬೇಕು. ಅದು ಯಾರಿಗೂ ಅರ್ಥ ಆಗಲ್ಲ. ಕಳೆದ ಸೀಸನ್ ನಡೆಯುವಾಗ ನನ್ನ ಸಿನಿಮಾದ ಶೂಟಿಂಗ್ ಮಹಾಬಲಿಪುರಂನಲ್ಲಿ ನಡೆಯುತ್ತಿತ್ತು. ಚೆನ್ನೈನಿಂದ ಅಲ್ಲಿಗೆ ಹೋಗಲು ಒಂದೂವರೆ ಗಂಟೆ ಬೇಕು. ಬೆಂಗಳೂರಿನಿಂದ ನಾನು ಅಲ್ಲಿಗೆ ಹೋಗಿ, ಅಲ್ಲಿ ಶೂಟಿಂಗ್ ಮಾಡಿ, ಮಧ್ಯರಾತ್ರಿ ಶೂಟಿಂಗ್ ಮುಗಿಸಿ, ಖಾಸಗಿ ವಿಮಾನದಲ್ಲಿ ವಾಪಸ್ ಬೆಂಗಳೂರಿಗೆ ಬಂದು ಬಿಗ್ ಬಾಸ್ ಎಪಿಸೋಡ್ ನೋಡಿ, ವೀಕೆಂಡ್ ಸಂಚಿಕೆ ಶೂಟ್ ಮಾಡಬೇಕು. ಇದರಿಂದ ನನಗೆ ತುಂಬ ಸುಸ್ತಾಗುತ್ತದೆ’ ಎಂದು ಸುದೀಪ್ ಹೇಳಿದ್ದಾರೆ.
‘ನಾವು ಬೆಂಗಳೂರಿನಲ್ಲೇ ಇದ್ದರೆ ಓಕೆ. ಎಲ್ಲೆಲ್ಲೋ ಇದ್ದರೆ ಸಿನಿಮಾ ಶೂಟಿಂಗ್ ಸರಿಯಾಗಿ ಮಾಡೋಕೆ ಆಗಲ್ಲ. ನಾನು ಎಲ್ಲಿಯೇ ಇದ್ದರೂ ಗುರುವಾರ ಶೂಟಿಂಗ್ ಮುಗಿಸಿಕೊಂಡು ಶುಕ್ರವಾರ ಓಡಿಬರಬೇಕು. ಸಾವಿರ ಜನರು ಶೂಟಿಂಗ್ ಮಾಡುತ್ತಾ ಇರುತ್ತೇವೆ. ಆದರೆ ಬಿಗ್ ಬಾಸ್ ಸಲುವಾಗಿ ಶುಕ್ರವಾರ, ಶನಿವಾರ ಬ್ರೇಕ್ ಆಗುತ್ತದೆ. ಸಿನಿಮಾಗಳು ಇಲ್ಲದಿದ್ದಾಗ ಓಕೆ. ಸಿನಿಮಾ ಶೂಟಿಂಗ್ ಇದ್ದರೆ ತಡ ಆಗುತ್ತದೆ. ಇಷ್ಟು ವರ್ಷ ಖುಷಿಯಿಂದಲೇ ಮಾಡಿದ್ದೇನೆ. ಈಗ ಬೇರೆ ಯಾರಾದರೂ ಮಾಡಲಿ’ ಎಂದು ಸುದೀಪ್ ಅವರು ಹೇಳಿದ್ದಾರೆ.
ಕಿಚ್ಚ ಸುದೀಪ್ ಅವರ ಮುಂದಿನ ಸೀಸನ್ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ. ಅವರ ಈ ನಿರ್ಧಾರಕ್ಕೆ ಕಾರಣ ಏನು ಎಂಬುದರ ಹಿಂದೆ ಅನೇಕ ಅಂತೆ–ಕಂತೆಗಳು ಹರಿದಾಡಿವೆ. ಆದರೆ ಈಗ ಸ್ವತಃ ಸುದೀಪ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಅಂತೆ ಕಂತೆಗಳಿಗೆ ಬ್ರೇಕ್ ಹಾಕಿದ್ದಾರೆ.