ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶಿಷ್ಟಾಚಾರ ಪಾಲನೆ ಆಗಬೇಕು. ಗಣ್ಯರು, ಅತಿಥಿಗಳು, ಸನ್ಮಾನಿತರು, ಸಾಧಕರು ಸೇರಿದಂತೆ ಸಮ್ಮೇಳನಕ್ಕೆ ಆಗಮಿಸುವ ಗಣ್ಯರ ಶಿಷ್ಟಾಚಾರ ಪಾಲನೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅವರು ಹೇಳಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶಿಷ್ಟಾಚಾರ ಪಾಲನೆ ಸಂಬಂಧ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಾ ಸಮಿತಿಗಳೊಂದಿಗೆ ಸಮನ್ವಯತೆ ಕಾಯ್ದುಕೊಳ್ಳಬೇಕು. ಸಮ್ಮೇಳನಕ್ಕೆ ಆಗಮಿಸುವ ಗಣ್ಯರಿಗೆ ಆಸನ, ವಾಹನ, ಊಟ, ವಸತಿ ಸೇರಿದಂತೆ ಎಲ್ಲಾ ರೀತಿಯ ಸೌಕರ್ಯಗಳು ಸೂಕ್ತ ರೀತಿಯಲ್ಲಿ ನೆರವೇರಬೇಕು ಎಂದರು.
ಸನ್ಮಾನಿತರಿಗೆ ನೀಡುವ ಸ್ಮರಣಿಕೆಯನ್ನು ಸೂಕ್ತ ರೀತಿಯಲ್ಲಿ ತಲುಪಿಸುವ ಕೆಲಸವಾಗಬೇಕು. ತಂಡಗಳನ್ನು ರಚನೆ ಮಾಡಿಕೊಂಡು ಕೆಲಸ ಮಾಡಬೇಕು. ವಸ್ತ್ರಸಂಹಿತೆ ಪಾಲನೆ ಆಗಬೇಕು. ಸಮ್ಮೇಳನದಲ್ಲಿ ಪ್ಲಾಸ್ಟಿಕ್ ಬಾಟಲ್ ಬಳಸದಂತೆ ನೋಡಿಕೊಳ್ಳಬೇಕು. ಮೈಕ್, ಲೈಟ್, ಸೌಂಡ್ ವ್ಯವಸ್ಥೆಯಲ್ಲಿ ಎಲ್ಲೂ ಆಭಾಸವಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
EPF Death Claim: ಆಧಾರ್ ದೃಢೀಕರಣ ಇಲ್ಲದೇ ಇದ್ದರೂ EPF ಡೆತ್ ಕ್ಲೈಮ್ ಸಾಧ್ಯವೆ..? ಇಲ್ಲಿದೆ ಮಾಹಿತಿ
ಸನ್ಮಾನಿತರು, ಗಣ್ಯರ ಪಟ್ಟಿಯನ್ನು ಮೊದಲೇ ಸಿದ್ಧಪಡಿಸಿಕೊಳ್ಳಬೇಕು. ಸನ್ಮಾನಿತರು, ಗಣ್ಯರಿಗೆ ಪ್ರತ್ಯೇಕ ವಿಐಪಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಗೊಂದಲಕ್ಕೆ ಒಳಗಾಗದೆ ಗಣ್ಯರನ್ನು ಗೌರವಯುತವಾಗಿ ಸತ್ಕರಿಸಬೇಕು. ಎಲ್ಲಿಯಾದರೂ ಲೋಪ ಕಂಡುಬಂದ ಮಾತುಗಳು ಕೇಳಿಬಂದಲ್ಲಿ ಸಂಬಂಧಪಟ್ಟವರ ಮೇಲೆ ಕ್ರಮಕೈಗೊಳ್ಳಲಾಗುತ್ತದೆ ಎಂದರು.
ಆಹಾರ ಗುಣಮಟ್ಟ ಪರೀಕ್ಷೆ ಸಮಿತಿಯವರು ಪ್ರತಿ ಹಂತದಲ್ಲಿ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿ ವರದಿಯನ್ನು ನೀಡಬೇಕು. ಸ್ಥಳದಲ್ಲೇ ಇದ್ದು ಗುಣಮಟ್ಟದ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಸನ್ಮಾನಿತರ ಫೋಟೋ ಲಿಸ್ಟ್ ಸಿದ್ಧಪಡಿಸಿಕೊಳ್ಳಬೇಕು. ಅವರೊಂದಿಗೆ ಸಂಪರ್ಕದಲ್ಲಿರಬೇಕು. ಅವರನ್ನು ಕರೆತರುವುದು ಬೀಳ್ಕೊಡುವ ಪ್ರತಿ ಜವಾಬ್ದಾರಿ ಸಂಬಂಧಿಸಿದ ಅಧಿಕಾರಿಗಳದ್ದಾಗಿರುತ್ತದೆ. ಗಂಭೀರತೆಯನ್ನು ಅರಿತು ಅಧಿಕಾರಿಗಳು ಕೆಲಸ ಮಾಡಬೇಕು ಎಂದರು.