ನಟ ಅಲ್ಲು ಅರ್ಜುನ್ ಜೈಲಿನಿಂದ ಹೊರ ಬಂದ ಬಳಿಕ ಮಾವ ಚಿರಂಜೀವಿ ಮನೆಗೆ ಭೇಟಿ ನೀಡಿದ್ದಾರೆ. ಪತ್ನಿ ಸ್ನೇಹಾ ರೆಡ್ಡಿ ಜೊತೆಗೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮೆಗಾಸ್ಟಾರ್ ಚಿರಂಜೀವಿ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಸಂಧ್ಯಾ ಥಿಯೇಟರ್ ಬಳಿ ನಡೆದ ಘಟನೆಯಿಂದಾಗಿ ಶುಕ್ರವಾರ ಬಂಧನಕ್ಕೊಳಗಾಗಿದ್ದ ಅಲ್ಲು ಅರ್ಜುನ್ ಇಡೀ ರಾತ್ರಿ ಜೈಲಿನಲ್ಲೇ ಕಳೆದರು. ಇದೀಗ ಚಿರಂಜೀವಿಯವರ ಆಹ್ವಾನದ ಮೇರೆಗೆ ಅಲ್ಲು ಅರ್ಜುನ್ ಚಿರಂಜೀವಿ ಮನೆಗೆ ಊಟಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ.
ಡಿಸೆಂಬರ್ 14ರಂದು ಶನಿವಾರ ಬೆಳಗ್ಗೆ ಅಲ್ಲು ಅರ್ಜುನ್ ಜಾಮೀನಿನ ಮೂಲಕ ಜೈಲಿನಿಂದ ಬಿಡುಗಡೆ ಆಗಿದ್ದರು. ಜೈಲಿನಿಂದ ಹೊರಬಂದ ನಂತರ ಮೊದಲ ಸಲ ಚಿರಂಜೀವಿ ಮನೆಗೆ ಹೋಗಿದ್ದರು. ಬಂಧನವಾದ ದಿನವೇ ಚಿರಂಜೀವಿ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದು, ಕ್ಯಾನ್ಸಲ್ ಮಾಡಿ ಪತ್ನಿ ಸುರೇಖಾ ಜೊತೆ ಅಲ್ಲು ಅರ್ಜುನ್ ಮನೆಗೆ ತೆರಳಿದ್ದರು.
ರಿಲೀಸ್ ಆದ ಮೇಲೆ ಮೆಗಾಸ್ಟಾರ್ ಪತ್ನಿ ಸುರೇಖಾ ಹೋಗಿ ಅಲ್ಲು ಅರ್ಜುನ್ನನ್ನು ಭೇಟಿಯಾಗಿದ್ದರು. ಅಳಿಯನ್ನು ಅಪ್ಪಿಕೊಂಡು ಭಾವುಕರಾಗಿದ್ದರು. ಅಲ್ಲು ಅರ್ಜುನ್ ಜೈಲಿನಿಂದ ಬಿಡುಗಡೆಯಾಗಿದ್ದೇ ತಡ ಟಾಲಿವುಡ್ ಸೆಲೆಬ್ರಿಟಿಗಳೆಲ್ಲಾ ಅರ್ಜುನ್ ಅವರನ್ನು ಭೇಟಿ ಮಾಡಲು ಹೋಗಿದ್ದರು.
ಪುಷ್ಪ 2 ಬಿಡುಗಡೆ ಸಂದರ್ಭದಲ್ಲಿ ಇದೇ ತಿಂಗಳ 4 ರಂದು ಸಂಧ್ಯಾ ಥಿಯೇಟರ್ ಬಳಿ ಕಾಲ್ತುಳಿತ ನಡೆದಿತ್ತು. ಕಾಲ್ತುಳಿತದಲ್ಲಿ ರೇವತಿ ಮೃತಪಟ್ಟಿದ್ದರು. ಆಕೆಯ ಪುತ್ರ ಶ್ರೀತೇಜ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಕುರಿತು ದಾಖಲಾಗಿರುವ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಆರೋಪಿಗಳ ಪಟ್ಟಿಗೆ ಸೇರಿಸಿದ್ದು ಡಿ.13ರಂದು ಅಲ್ಲು ಅರ್ಜುನ್ ಅವರನ್ನು ಅವರ ನಿವಾಸದಿಂದ ಬಂಧಿಸಿದ್ದರು. ಬಳಿಕ ಜಾಮೀನಿನ ಮೂಲಕ ಬಿಡುಗಡೆ ಗೊಳಿಸಲಾಗಿತ್ತು.
ಅಲ್ಲು ಅರ್ಜುನ್ ಮನೆಗೆ ತೆರಳಿದ ಬಳಿಕ ಟಾಲಿವುಡ್ ಸೆಲೆಬ್ರಿಟಿಗಳು ಹಾಜರಿದ್ದರು. ವಿಜಯ್ ದೇವರಕೊಂಡ, ನಾಗ ಚೈತನ್ಯ, ಅಕ್ಕಿನೇನಿ ಅಖಿಲ್, ರಾಣಾ, ವೆಂಕಟೇಶ್, ಸುಧೀರ್ ಬಾಬು, ಅಡಿವಿ ಶೇಷ್, ಸುಧೀರ್ಗಾಲಿ ಸುಧೀರ್ ಹೀಗೆ ಹಲವು ನಾಯಕರು ಬಂದಿದ್ದರು. ಇನ್ನೊಂದೆಡೆ ಸುಕುಮಾರ್, ಬೋಯಪತಿ, ಕೊರಟಾಲ ಶಿವ, ವಕ್ಕಂತಂ ವಂಶಿ, ಸುರೇಂದರ್ ರೆಡ್ಡಿ ಹೀಗೆ ಹಲವು ನಿರ್ದೇಶಕರು ಕೂಡ ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.