ಪುಷ್ಪ 2 ಸಿನಿಮಾದ ಪ್ರೀಮಿಯರ್ ವೇಳೆ ಮಹಿಳೆ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಂಧಿಸಿದ ಬಳಿಕ ಮಧ್ಯಂತರ ಜಾಮೀನಿನ ಮೂಲಕ ಬಿಡುಗಡೆ ಗೊಳಿಸಿದ್ದಾರೆ. ಸದ್ಯ ನಟ ಅಲ್ಲು ಅರ್ಜುನ್ ಬಂಧನ ವಿಚಾರದಲ್ಲಿ ಪೊಲೀಸರ ನಡೆಯನ್ನು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಸಮರ್ಥಿಸಿಕೊಂಡಿದ್ದಾರೆ.
ಅಲ್ಲು ಅರ್ಜುನ್ ಸುಮ್ಮನೆ ಸಿನಿಮಾ ನೋಡಿ ಹೊರ ಬಂದಿಲ್ಲ. ಅವರು ತಮ್ಮ ಕಾರಿನ ಸನ್ರೂಫ್ನಿಂದ ಹೊರಬಂದು ಅಭಿಮಾನಿಗಳತ್ತ ಕೈಬೀಸಿದರು. ಚಲನಚಿತ್ರದ ಸಂಭ್ರಮಾಚರಣೆ ಮಾಡುತ್ತಿದ್ದ ಅಭಿಮಾನಿಗಳನ್ನು ಹುರಿದುಂಬಿಸಿದರು. ಇದರಿಂದ ಪರಿಸ್ಥಿತಿ ಹತೋಟಿ ತಪ್ಪಿತು ಎಂದು ಸಿಎಂ ಹೇಳಿದ್ದಾರೆ.
ನಟನ ಬಂಧನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, ಕಾಲ್ತುಳಿತಕ್ಕೆ ಒಳಗಾದ ಸಂತ್ರಸ್ತೆ ಮತ್ತು ಅವರ ಕುಟುಂಬದ ಬಗ್ಗೆ ಯಾರು ಕೂಡ ಮಾತನಾಡುತ್ತಿಲ್ಲ. ಬಡ ಕುಟುಂಬವೊಂದು ಸದಸ್ಯನನ್ನು ಕಳೆದುಕೊಂಡಿದೆ. ಮೃತ ಮಹಿಳೆಯ ಮಗ ಇನ್ನೂ ಆಸ್ಪತ್ರೆಯಲ್ಲಿ ಕೋಮಾದಲ್ಲಿದ್ದಾನೆ. ಅವನು ಕೋಮಾದಿಂದ ಹೊರಬಂದು ತನ್ನ ತಾಯಿಯಿಲ್ಲದ ಜೀವನವನ್ನು ನಡೆಸಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಿನಿಮಾ ತಾರೆಯರು ಹಣ ಸಂಪಾದನೆಗಾಗಿಯೇ ಇದ್ದಾರೆ. ಜನಸಾಮಾನ್ಯರಿಗೂ ಇದಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ನಿಮ್ಮ ನೆಚ್ಚಿನ ತೆಲುಗು ನಟ ಯಾರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ತೆಲಂಗಾಣ ಸಿಎಂ, ನಾನೇ ಸ್ಟಾರ್. ನಾನು ಯಾರ ಅಭಿಮಾನಿಯೂ ಅಲ್ಲ ಎಂದಿದ್ದಾರೆ.