ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಡೆದ ಚುನಾವಣೆಯಲ್ಲಿ ಮತ್ತೆ ಸಾರಾ ಗೋವಿಂದು ಬಣಕ್ಕೆ ಜಯವಾಗಿದೆ. ಈ ಬಾರಿ ಫಿಲ್ಮ್ ಚೇಂಬರ್ ಅಧ್ಯಕ್ಷರಾಗಿ ಎಂ.ನರಸಿಂಹಲು ಆಯ್ಕೆಯಾಗಿದ್ದಾರೆ.
ಮಧ್ಯಾಹ್ನದಿಂದ ಚುನಾವಣೆ ನಡೆದಿದ್ದು, ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಇವಿಎಂ ಬಳಕೆ ಮಾಡಲಾಗಿದೆ. ಗುರುರಾಜ ಕಲ್ಯಾಣ ಮಂಟಪದಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪ್ರಮುಖವಾಗಿ ಸಾರಾ ಗೋವಿಂದು ಬಣ ಮತ್ತು ಭಾಮಾ ಹರೀಶ್ ಅವರ ಬಣಗಳ ಮಧ್ಯೆ ಜಿದ್ದಾಜಿದ್ದಿ ನಡೆದಿತ್ತು. ಅಂತಿಮವಾಗಿ ಸಾರಾ ಗೋವಿಂದು ಬಣಕ್ಕೆ ಜಯ ದೊರೆತಿದೆ.
ಅಧ್ಯಕ್ಷ ಸ್ಥಾನಕ್ಕೆ ನರಸಿಂಹಲು ಎಂ, ಉಪಾಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ ವಲಯ ಸಫೈರ್ ವೆಂಕಟೇಶ್, ನಿರ್ಮಾಪಕ ವಲಯ ಕಾರ್ಯದರ್ಶಿ ಸ್ಥಾನಕ್ಕೆ ಪ್ರವೀಣ್ ಕುಮಾರ್, ವಿತರಕ ವಲಯದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್ ಸಿ ಶ್ರೀನಿವಾಸ್, ವಿತರಕ ವಲಯ ಗೌರವ ಕಾರ್ಯದರ್ಶಿ ಕುಮಾರ್ ಎಂ ಎನ್ (ಕೆಸಿಎನ್ ಕುಮಾರ್), ಪ್ರದರ್ಶಕ ವಲಯ ಉಪಾಧ್ಯಕ್ಷ ಸ್ಥಾನ ರಂಗಪ್ಪ, ಪ್ರದರ್ಶಕ ವಲಯ ಕಾರ್ಯದರ್ಶಿ ಸ್ಥಾನಕ್ಕೆ ಕುಶಾಲ್ ಎಲ್, ಖಚಾಂಚಿ ಸ್ಥಾನಕ್ಕೆ-ಚಿಂಗಾರಿ ಮಹದೇವ್ ಆಯ್ಕೆ ಆಗಿದ್ದಾರೆ.
ನಿರ್ಮಾಪಕ, ವಿತರಕ ಮತ್ತು ಪ್ರದರ್ಶಕ ವಲಯಗಳಿಂದ ಒಟ್ಟು 128 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಅದರಲ್ಲಿ 24 ಮಂದಿ ಅವಿರೋಧವಾಗಿ ಆಗಿಬಿಟ್ಟಿದ್ದರು. ವಾಣಿಜ್ಯ ಮಂಡಳಿಯಲ್ಲಿ ಒಟ್ಟು 1,409 ಮತದಾರರಿದ್ದು ಇದರಲ್ಲಿ ಅತಿ ಹೆಚ್ಚು ಮತ ನಿರ್ಮಾಪಕ ವಲಯದಿಂದಲೇ ಇದೆ. ನಿರ್ಮಾಪಕರ ವಲಯದಿಂದ 889 ಮತಗಳಿವೆ. ಈ ಬಾರಿ ಪ್ರದರ್ಶಕರ ವಲಯಕ್ಕೆ ಅಧ್ಯಕ್ಷ ಸ್ಥಾನ ಮೀಸಲಿಡಲಾಗಿದ್ದು, ವೈಭವಿ ಚಿತ್ರಮಂದಿರದ ಮಾಲೀಕ ನರಸಿಂಹಲು ಎಂ ಮತ್ತು ವಜ್ರೇಶ್ವರಿ ಚಿತ್ರಮಂದಿರದ ಮಾಲೀಕ ಸುಂದರ್ ರಾಜು ಆರ್ ಅವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ವಿಜಯ ನರಸಿಂಹಲು ಎಂ ಅವರ ಪಾಲಾಗಿದೆ.