ಹೈದರಾಬಾದ್ ನಲ್ಲಿ ಪುಷ್ಪ 2 ಸಿನಿಮಾದ ಪ್ರೀಮಿಯರ್ ವೇಳೆ ಕಾಲ್ತುಳಿದಿಂದ ಮಹಿಳೆ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದ ನಟ ಅಲ್ಲು ಅರ್ಜುನ್ಗೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈಗಾಗಲೇ ಅಲ್ಲು ಅರ್ಜುನ್ಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ನಾಂಪಲ್ಲಿ ನ್ಯಾಯಾಲಯ ವಿಧಿಸಿತ್ತು, ಇದೀಗ ಹೈಕೋರ್ಟ್ ಮಧ್ಯಂತರ ಜಾಮೀನನ್ನು ನೀಡಿದೆ. ಆದರೆ ಅಲ್ಲು ಅರ್ಜುನ್ ಸೋಮವಾರದ ವರೆಗೆಯಾದರೂ ಜೈಲು ವಾಸ ಅನುಭವಿಸುವ ಸಾಧ್ಯತೆ ಇದೆ.
ಎಫ್ಐಆರ್ ರದ್ದು ಕೋರಿ ಅಲ್ಲು ಅರ್ಜುನ್ ಪರ ವಕೀಲರು ತೆಲಂಗಾಣ ಹೈಕೋರ್ಟ್ನಲ್ಲಿ ಅರ್ಜಿ ಹಾಕಿದ್ದರು. ಶಾರುಖ್ ಖಾನ್ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳ ಉಲ್ಲೇಖ ಮಾಡಿ ಅಲ್ಲು ಅರ್ಜುನ್ ಪರ ವಕೀಲರು ವಾದ ಮಂಡಿಸಿದರು. ಆದರೆ ಹೈಕೋರ್ಟ್ನಲ್ಲಿ ಎಫ್ಐಆರ್ ರದ್ದು ಮಾಡಲು ಸಾಧ್ಯವಾಗಲಿಲ್ಲ. ವಾದ ಮುಂದುವರೆಸಿ, ಮಧ್ಯಂತರ ಜಾಮೀನಿನ ಅರ್ಜಿಯ ವಾದ ಮಂಡಿಸಿದ ಅಲ್ಲು ಅರ್ಜುನ್ ಪರ ವಕೀಲರು ಅರ್ನಬ್ ಗೋಸ್ವಾಮಿ ಪ್ರಕರಣ ಉಲ್ಲೇಖಿಸಿ ವಾದ ಮಂಡಿಸಿದರು.
ಅಲ್ಲು ಅರ್ಜುನ್ ಗೂ ರೇವತಿ ಸಾವಿಗೆ ನೇರ ಸಂಬಂಧವೇ ಇಲ್ಲ. ಇದು ಅಚಾನಕ್ಕಾಗಿ ನಡೆದಿರುವ ಘಟನೆ. ಇಂಥಹಾ ಅಪಘಾತಗಳು ಸಾಕಷ್ಟು ನಡೆಯುತ್ತಲೇ ಇರುತ್ತವೆ. ಈ ರೀತಿಯ ಘಟನೆಗಳಿಗೆ ನಟರನ್ನು, ರಾಜಕಾರಣಿಗಳನ್ನು ಕೊಲೆಗಾರರು ಎನ್ನಲಾಗದು ಎಂದು ವಾದಿಸಿದರು. ಹಲವು ಇತರೆ ಪ್ರಕರಣಗಳ ಉಲ್ಲೇಖಗಳನ್ನು ಸಹ ವಕೀಲರು ನ್ಯಾಯಾಲಯದಲ್ಲಿ ಮಾಡಿದರು. ವಾದ ಆಲಿಸಿದ ನ್ಯಾಯಮೂರ್ತಿಗಳು ಅಲ್ಲು ಅರ್ಜುನ್ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದಾರೆ.
ಅಲ್ಲು ಅರ್ಜುನ್ಗೆ ನಿಯಮಿತ ಅವಧಿಯ ಮಧ್ಯಂತರ ಜಾಮೀನು ಮಂಜೂರು ಮಾಡಿದ ತೆಲಂಗಾಣ ಹೈಕೋರ್ಟ್, ಬಂಧನ ಈಗಾಗಲೇ ಆಗಿರುವ ಕಾರಣ ಜೈಲು ಸೂಪರಿಂಡೆಂಟ್ಗೆ ಬಾಂಡ್ಗಳನ್ನು ನೀಡಿ ಬಿಡುಗಡೆ ಆಗಬಹುದು ಎಂದು ಆದೇಶ ಹೊರಡಿಸಿದೆ.