ಹುಬ್ಬಳ್ಳಿ: ‘ಆರೋಗ್ಯದ ವಿಚಾರದಲ್ಲಿ ಉತ್ತರ ಕರ್ನಾಟಕ ಭಾಗದ ಜನರಿಗೆ ಆಶಾಕಿರಣವಾಗಿರುವ ಕೆಎಂಸಿಆರ್ಐ ಆಸ್ಪತ್ರೆ ಬಡವರಿಗೆ, ರೋಗಿಗಳಿಗೆ ಜೀವದಾನ ಮಾಡುವ ಕೇಂದ್ರವಾಗಿರಬೇಕಿತ್ತು. ಆದರೆ ಇದು ರೋಗಿಗಳ ರಕ್ತ ಹೀರುವ ಕೇಂದ್ರವಾಗಿ ಪರಿವರ್ತನೆ ಆಗಿದೆ’ ಎಂದು ಆಮ್ ಆದ್ಮ ಪಕ್ಷದ (ಎಎಪಿ) ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣ್ ನಡಕಟ್ಟಿನ್ ಆರೋಪಿಸಿದರು.
ಮಾಜಿ ಬಿಗ್ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಅರೆಸ್ಟ್: ಅಭಿಮಾನಿಗಳು ಶಾಕ್!
ಆಸ್ಪತ್ರೆಯ ಪ್ರವೇಶ ದ್ವಾರದ ಬಳಿಯ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪಕ್ಷದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು. ಆಸ್ಪತ್ರೆಗೆ ಬರುವ ರೋಗಿಗಳಿಗೆ ತುರ್ತು ಚಿಕಿತ್ಸೆ ವ್ಯವಸ್ಥೆ, ಸರಿಯಾದ ಮಾಹಿತಿ ಕೇಂದ್ರ ಹಾಗೂ ಸಿಬ್ಬಂದಿಯಿಂದ ಸರಿಯಾದ ಸ್ಪಂದನೆ ದೊರಕದೆ ಚಿಕಿತ್ಸೆ ವಿಳಂಬ ಆಗುತ್ತಿದೆ. ಈ ವಿಚಾರವಾಗಿ ಆಡಳಿತ ಮಂಡಳಿಯಾಗಲಿ, ಅಧಿಕಾರಿಗಳಾಗಲಿ ಮುತುವರ್ಜಿ ವಹಿಸುತ್ತಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
‘ಆಸ್ಪತ್ರೆಯಲ್ಲಿ ದಾಖಲಾಗಬೇಕಾದರೂ ಹಣ ನೀಡಬೇಕು, ಬಿಡುಗಡೆ ಆಗಬೇಕಾದರೂ ಹಣ ನೀಡಬೇಕು. ಇದು ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ’ ಎಂದು ಪ್ರಶ್ನಿಸಿದರು. ಸಿಬ್ಬಂದಿ ನೇಮಕಾತಿಯಲ್ಲಿಯೂ ಅಕ್ರಮ ನಡೆಯುತ್ತಿದೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಬೇಕೆಂದರೂ ದುಡ್ಡು ಕೊಡಬೇಕು. ಹಣ ಕೊಟ್ಟರೆ ಕಾಯಂ ನೌಕರಿ ಖಚಿತ. ಕ್ಯಾಥ್ಲ್ಯಾಬ್ನಲ್ಲಿ ಗುತ್ತಿಗೆ ಆಧಾರದಲ್ಲಿ ಶುಶೂಷಕಿ ಆಗಿ ಕಾರ್ಯನಿರ್ವಹಿಸುತ್ತಿರುವ ಎಂ. ಸುನಂದಾ ಅವರಿಗೂ ನೇಮಕಾತಿ ಸಂಬಂಧಿಸಿ ಅನ್ಯಾಯ ಆಗಿದೆ. ಅವರಿಗೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲವಿದೆ. ಬೇಡಿಕೆ ಈಡೇರುವ ವರೆಗೂ ಅನಿರ್ದಿಷ್ಟಾವಧಿ ಮುಷ್ಕರ ಮಾಡಲಾಗುವುದು’ ಎಂದು ತಿಳಿಸಿದರು.
‘ಸಾರ್ವಜನಿಕರಿಗಾಗಿ ಆಸ್ಪತ್ರೆಯಲ್ಲಿ ಮಾಹಿತಿ ಕೇಂದ್ರ ಸ್ಥಾಪನೆ ಮಾಡಬೇಕು. ಆವರಣದಲ್ಲಿ ವಾಹನ ನಿಲುಗಡೆಗೆ ಸೂಕ್ತ ಸೌಲಭ್ಯ ಒದಗಿಸಬೇಕು. ಸರ್ಕಾರಿ ನಿಯಮಾನುಸಾರ ಹೋಟೆಲ್ ತಿನಿಸುಗಳ ಹಾಗೂ ಹಣ್ಣಿನ ರಸದ ಮಳಿಗೆಗಳಲ್ಲಿ ನ್ಯಾಯೋಚಿತ ದರ ನಿಗದಿ ಮಾಡಬೇಕು. ಅನ್ಯಾಯ, ಭ್ರಷ್ಟಾಚಾರದ ವಿರುದ್ಧ ದೂರು ದಾಖಲಿಸಲು ಕೇಂದ್ರವೊಂದನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಸುನಂದ ಎಂ., ಪಕ್ಷದ ಸಂಜೀವ್ ಬೆಳಗೇರಿ, ಜಾಕೀರ್ ರಾಮದುರ್ಗ, ಮಂಜುನಾಥ್ ಬೆಳಗೇರಿ, ಅಘನಾ ಸದಾನಂದ, ಎಸ್. ಹುಬ್ಬಳ್ಳಿಕರ್, ಮಲ್ಲಪ್ಪ ತಡಸದ್, ಮಲ್ಲಿಕಾರ್ಜುನಯ್ಯ ಹಿರೇಮಠ, ರೇವಣಸಿದ್ದಪ್ಪ ಹುಬ್ಬಳ್ಳಿ ಭಾಗವಹಿಸಿದ್ದರು.