ದಕ್ಷಿಣ ಕೊರಿಯಾದಲ್ಲಿ ಮಿಲಿಟರಿ ಆಡಳಿತ ಅನುಷ್ಠಾನದ ಕುರಿತು ತನಿಖೆ ನಡೆಯುತ್ತಿದೆ. ಈ ಮಧ್ಯೆ ಪ್ರಕರಣದಲ್ಲಿ ರಕ್ಷಿಣಾ ಸಚಿವ ಕಿಮ್ ಯೋಂಗ್ ಹ್ಯುನ್ ಹೆಸರು ಕೇಳಿ ಬಂದಿದ್ದು ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇದೀಗ ಕಿಮ್ ಯೋಂಗ್ ಹ್ಯುನ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದು ಅವರನ್ನು ರಕ್ಷಿಸಲಾಗಿದೆ.
ಸಿಯೋಲ್ನ ಬಂಧನ ಕೇಂದ್ರದಲ್ಲಿ ಕಿಮ್ ಆತ್ಮಹತ್ಯೆಗೆ ಯತ್ನಿಸಿದರು. ಆದರೆ ಅವರನ್ನು ರಕ್ಷಿಸಲಾಗಿದ್ದು ಈಗ ಅವರು ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು ಕೊರಿಯಾ ತಿದ್ದುಪಡಿ ಸೇವಾ ಆಯುಕ್ತ ಜನರಲ್ ಶಿನ್ ಯೋಂಗ್ ಹೈ ತಿಳಿಸಿದರು.
ದಂಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಸಿಯೋಲ್ ನ್ಯಾಯಾಲಯವು ಕಿಮ್ ವಿರುದ್ಧ ವಾರಂಟ್ ಹೊರಡಿಸಿದ ನಂತರ ಬುಧವಾರ ಅವರನ್ನು ಬಂಧಿಸಲಾಯಿತು. ಡಿಸೆಂಬರ್ 3ರಂದು ತುರ್ತು ಮಿಲಿಟರಿ ಆಡಳಿತಕ್ಕೆ ಆದೇಶ ನೀಡಿದ ನಂತರ ಬಂಧಿಸಲಾದ ಮೊದಲ ವ್ಯಕ್ತಿ ಕಿಮ್ ಆಗಿದ್ದಾರೆ.
ದಕ್ಷಿಣ ಕೊರಿಯಾದ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿದೆ. ವಿರೋಧ ಪಕ್ಷ ಡೆಮಾಕ್ರಟಿಕ್ ಪಕ್ಷವು ಯೂನ್ ವಿರುದ್ಧ ದೋಷಾರೋಪಣೆಗೆ ಹೊಸ ನಿರ್ಣಯವನ್ನು ಮಂಡಿಸುವ ಕೆಲವೇ ಗಂಟೆಗಳ ಮೊದಲು ಈ ಬೆಳವಣಿಗೆ ಸಂಭವಿಸಿದೆ. ಅಲ್ಲದೆ, ದೇಶದ ಕಾನೂನು ಜಾರಿ ಸಂಸ್ಥೆಗಳು ಅಧ್ಯಕ್ಷರ ಘೋಷಣೆಯು ದಂಗೆಯೇ ಅಥವಾ ಇಲ್ಲವೇ ಎಂಬುದರ ಕುರಿತು ತನಿಖೆ ನಡೆಸುತ್ತಿದೆ. ಕಳೆದ ಶನಿವಾರ ಆಡಳಿತ ಪಕ್ಷವು ಮತದಾನವನ್ನು ಬಹಿಷ್ಕರಿಸಿದ್ದರಿಂದ ಮೊದಲ ದೋಷಾರೋಪಣೆ ಪ್ರಯತ್ನ ವಿಫಲವಾಯಿತು.
ಶನಿವಾರದಂದು ಹೊಸ ಪ್ರಸ್ತಾಪದ ಮೇಲೆ ಮತದಾನ ನಡೆಸುವುದು ತನ್ನ ಗುರಿಯಾಗಿದೆ ಎಂದು ಡೆಮಾಕ್ರಟಿಕ್ ಪಕ್ಷ ಹೇಳಿದೆ. ರಾಷ್ಟ್ರೀಯ ಪೊಲೀಸ್ ಏಜೆನ್ಸಿ ಕಮಿಷನರ್ ಜನರಲ್ ಚೋ ಜಿ-ಹೊ ಮತ್ತು ರಾಜಧಾನಿ ಸಿಯೋಲ್ನ ಮೆಟ್ರೋಪಾಲಿಟನ್ ಪೊಲೀಸ್ ಏಜೆನ್ಸಿಯ ಮುಖ್ಯಸ್ಥ ಕಿಮ್ ಬಾಂಗ್-ಸಿಕ್ ಅವರನ್ನು ಸಿಯೋಲ್ನ ನಾಮ್ಡೇಮುನ್ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.