ಹುಬ್ಬಳ್ಳಿ : ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ಒಡಿಶಾದ ಪುರಿಯಲ್ಲಿ ಡಿ. 7 ರಿಂದ 10ರವರೆಗೆ ಆಯೋಜಿಸಿದ್ದ 29ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್ಶಿಪ್ನಲ್ಲಿ ನೈಋತ್ಯ ರೈಲ್ವೆ ವಲಯದ ಸೈಕ್ಲಿಸ್ಟ್ಗಳು ಉತ್ತಮ ಸಾಧನೆ ಮಾಡಿದ್ದಾರೆ. ನೈಋತ್ಯ ರೈಲ್ವೆಯ ಏಳು ಸ್ಪರ್ಧಿಗಳ ತಂಡದಲ್ಲಿ ವೆಂಕಪ್ಪ ಕೆ, ಮೇಘಾ ಗುಗಾಡ್, ಕಾವೇರಿ ಮುರಾನಾಳ್ ಮತ್ತು ಚೈತ್ರಾ ಬೋರ್ಜಿ ಅವರನ್ನೊಳಗೊಂಡ ತಂಡ 60 ಕಿ.ಮೀ. ಮಿಶ್ರ ತಂಡ ರಿಲೇ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿದರು.
ಕಡಿಮೆ ಬಜೆಟ್ʼನಲ್ಲಿ ರಸಗೊಬ್ಬರದ ವ್ಯಾಪಾರ ಮಾಡಿ 15 ಲಕ್ಷದವರೆಗೂ ಲಾಭ ಪಡೆಯಿರಿ.!
ವೈಯಕ್ತಿಕ ಸಾಧನೆಗಳು: ಬಾಗಲಕೋಟೆಯಲ್ಲಿ ಕಮರ್ಷಿಯಲ್ ಕ್ಲರ್ಕ್ ಕಮ್ ಟಿಕೆಟ್ ಕಲೆಕ್ಟರ್ ಆಗಿರುವ ವೆಂಕಪ್ಪ ಕೆ. ಅವರು 60 ಕಿ.ಮೀ ಮಿಶ್ರ ತಂಡ ರಿಲೇ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಹುಬ್ಬಳ್ಳಿಯಲ್ಲಿ ಕಮರ್ಷಿಯಲ್ ಕ್ಲರ್ಕ್ ಕಮ್ ಟಿಕೆಟ್ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿರುವ ಕಾವೇರಿ ಮುರಾನಾಳ್ ಅವರು 60 ಕಿ.ಮೀ ವೈಯಕ್ತಿಕ ರೋಡ್ ರೇಸ್ ಮತ್ತು 60 ಕಿ.ಮೀ ಮಿಶ್ರ ತಂಡ ರಿಲೇ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದರು.
ಹುಬ್ಬಳ್ಳಿಯಲ್ಲಿ ಕ್ಲರ್ಕ್ ಆಗಿರುವ ಮೇಘಾ ಗುಗಾಡ್ ಅವರು 30 ಕಿ.ಮೀ. ವೈಯಕ್ತಿಕ ಟೈಮ್ ಟ್ರಯಲ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಮತ್ತು 60 ಕಿ.ಮೀ ಮಿಶ್ರ ತಂಡ ರಿಲೇ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಚೈತ್ರಾ ಬೋರ್ಜಿ 60 ಕಿ.ಮೀ. ಮಿಶ್ರ ತಂಡ ರಿಲೇ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ತಂಡದ ಯಶಸ್ಸಿಗೆ ಕೊಡುಗೆ ನೀಡಿದರು. ತರಬೇತುದಾರ ನಿಜಪ್ಪ ವೈ. ಅವರು ಕ್ರೀಡಾಪಟುಗಳಿಗೆ ತರಬೇತಿ ನೀಡಿದ್ದರು. ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಅರವಿಂದ ಶ್ರೀವಾಸ್ತವ ಅವರು ಆಟಗಾರರ ಅಸಾಧಾರಣ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.