ನವದೆಹಲಿ: ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಲೋಕಸಭೆಯಲ್ಲಿ ಶರಾವತಿ ಜಲವಿದ್ಯುತ್ ಯೋಜನೆ ಸಂತ್ರಸ್ತರ ವಿಚಾರವನ್ನು ಕನ್ನಡದಲ್ಲೇ ಪ್ರಸ್ತಾಪಿಸಿ ಸದನದ ಗಮನ ಸೆಳೆದರು. ಸದನದಲ್ಲಿ ಮಾತನಾಡಿ, ಅನೇಕ ವರ್ಷಗಳ ಒಂದು ಸಮಸ್ಯೆ. ಸ್ವಾತಂತ್ರ್ಯ ಬಂದು 77 ವರ್ಷ ಆಯ್ತು. ಸಂವಿಧಾನ ಬಂದು 75 ವರ್ಷ ಆಯ್ತು. ನಾನು ಇವತ್ತು ಶರಾವತಿ ಜಲವಿದ್ಯುತ್ ಯೋಜನೆ ಸಂತ್ರಸ್ತರ ವಿಚಾರವನ್ನು ಪ್ರಸ್ತಾಪಿಸುತ್ತಿದ್ದೇನೆ. ಇದಕ್ಕೂ ಹತ್ತಿರತ್ತಿರ 75 ವರ್ಷಗಳು ತುಂಬುತ್ತಿವೆ ಎಂದು ಗಮನಕ್ಕೆ ತಂದರು. 1958-64 ರ ನಡುವೆ ಶರಾವತಿ ಯೋಜನೆ ಆಗುತ್ತದೆ. 4 ರಿಂದ 5 ಸಾವಿರ ರೈತರ ಕುಟುಂಬಗಳ ಕೃಷಿ ಭೂಮಿ ಈ ಯೋಜನೆಯಿಂದ ಮುಳುಗಡೆಯಾಗುತ್ತದೆ. ಇದುವರೆಗೂ ಸಂತ್ರಸ್ತ ರೈತರಿಗೆ ಕೃಷಿ ಭೂಮಿ ಒದಗಿಸಿಕೊಡುವ ಕೆಲಸವನ್ನು ಹಿಂದಿನ ಸರ್ಕಾರಗಳು ಮಾಡಿಲ್ಲ ಎಂದು ತಿಳಿಸಿದರು.
ಸಂಸತ್ ನಲ್ಲಿ ಬಿಜೆಪಿ ಸಂಸದರಿಗೆ ಗುಲಾಬಿ, ತ್ರಿವರ್ಣ ಧ್ವಜ ನೀಡುವ ಮೂಲಕ ಕಾಂಗ್ರಸ್ ವಿಭಿನ್ನ ಪ್ರತಿಭಟನೆ
ರಾಜ್ಯ ಸರ್ಕಾರ 1958-69 ರ ಅವಧಿಯಲ್ಲಿ 9136 ಎಕರೆ ಅರಣ್ಯ ಪ್ರದೇಶವನ್ನು ಸಂತ್ರಸ್ತರಿಗೆ ಪುನರ್ವಸತಿ ಕೊಡುವುದಕ್ಕಾಗಿ ಪ್ರಸ್ತಾವನೆ ಕಳಿಸಿರುತ್ತಾರೆ. 50 ವರ್ಷಗಳ ಹಿಂದೆಯೇ ಈ ಕೆಲಸ ಆಗಿದೆ. ಆದರೆ, ಇದುವರೆಗೂ ಯಾವುದೇ ಪರಿಹಾರ ಸಿಕ್ಕಿಲ್ಲ. ಯಾವುದೇ ಸೌಲಭ್ಯ ಸಿಗದೇ ರೈತರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಇದೂವರೆಗೂ ಆಗಿಲ್ಲ. ಅರಣ್ಯವನ್ನು ಡಿ ರಿಸರ್ವ್ ಮಾಡಿ ಪುನರ್ವಸತಿ ಕಲ್ಪಿಸಬೇಕು ಎಂದು ಕೇಂದ್ರ ಪರಿಸರ ಸಚಿವಾಲಯಕ್ಕೆ ಸಂಸದರು ಒತ್ತಾಯ ಮಾಡಿದ್ದಾರೆ.