ಲಂಡನ್: ವಿಶ್ವದ ಅತ್ಯಂತ ಹಳೆಯ ಚರ್ಚಾ ಸೊಸೈಟಿಗಳಲ್ಲೊಂದಾದ ಕ್ಯಾಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಹಿಸ್ಟಾರಿಕ್ ಕ್ಯಾಂಬ್ರಿಡ್ಜ್ ಯೂನಿಯನ್ ಸೊಸೈಟಿ ಅಧ್ಯಕ್ಷೆಯಾಗಿ ಭಾರತೀಯ ಮೂಲದ ವಿದ್ಯಾರ್ಥಿನಿ ಅನುಷ್ಕಾ ಕಾಳೆ ಆಯ್ಕೆಯಾಗಿದ್ದಾರೆ. 1815ರಿಂದ ವಾಕ್ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು ಬಂದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಕ್ಯಾಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಹಿಸ್ಟಾರಿಕ್ ಕ್ಯಾಂಬ್ರಿಡ್ಜ್ ಯೂನಿಯನ್ ಸೊಸೈಟಿ ಪಾತ್ರವಾಗಿದೆ.
ಮುಂದಿನ ಈಸ್ಟರ್ 2025 ಅವಧಿಗಾಗಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 126 ಮತಗಳನ್ನು ಪಡೆದ ಕಾಳೆ, ಅವಿರೋಧವಾಗಿ ಆಯ್ಕೆಯಾದರು. ಈ ಸೊಸೈಟಿಯ ಚರ್ಚಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುವ ಅವಧಿಯಲ್ಲಿ ಅವರು, ವಿಶ್ವವಿದ್ಯಾನಿಲಯದಲ್ಲಿ ಇಂಡಿಯಾ ಸೊಸೈಟಿಯಂಥ ಸಾಂಸ್ಕೃತಿಕ ಸೊಸೈಟಿಗಳ ಜತೆ ಸಂಬಂಧವನ್ನು ಬಲಪಡಿಸುವ ವೇದಿಕೆಯನ್ನು ನಿರ್ವಹಿಸುತ್ತಿದ್ದಾರೆ.
“ಕ್ಯಾಂಬ್ರಿಡ್ಜ್ ಯೂನಿಯನ್ ಸೊಸೈಟಿಗೆ 2025ರ ಈಸ್ಟರ್ ಅವಧಿಗಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಅತೀವ ಸಂತಸ ತಂದಿದೆ ಹಾಗೂ ಇದು ದೊಡ್ಡ ಗೌರವ. ಎಲ್ಲ ಸದಸ್ಯರ ಬೆಂಬಲಕ್ಕೆ ಕೃತಜ್ಞತೆಗಳು” ಎಂದು ಅನುಷ್ಕಾ ತಿಳಿಸಿದ್ದಾರೆ.
“ನನ್ನ ಅಧಿಕಾರಾವಧಿಯಲ್ಲಿ ವಿಶ್ವವಿದ್ಯಾನಿಲಯ ಇಂಡಿಯಾ ಸೊಸೈಟಿಯಂಥ ಸಾಂಸ್ಕೃತಿಕ ಸಂಘಟನೆಗಳ ಜತೆಗೆ ಸಹಭಾಗಿತ್ವ ಹೊಂದಿ ಸಂಘಟನೆಯ ವೈವಿಧ್ಯತೆ ಮತ್ತು ಲಭ್ಯತೆಯನ್ನು ವಿಸ್ತರಿಸಲು ಉದ್ದೇಶಿಸಿದ್ದೇನೆ. ಅಂತರರಾಷ್ಟ್ರೀಯ ಉಪನ್ಯಾಸಗಳನ್ನು ಆಯೋಜಿಸುವುದು ಮತ್ತು ಜಾಗತಿಕ ಚರ್ಚೆಗಳಿಗೆ ವೇದಿಕೆ ಕಲ್ಪಿಸುವ ಕಾರ್ಯ ಮಂದುವರಿಸಲಿದ್ದೇನೆ” ಎಂದು ಅನುಷ್ಕಾ ಕಾಳೆ ಹೇಳಿದ್ದಾರೆ.