ನವದೆಹಲಿ : ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೆಹಲಿ-ಹರಿಯಾಣ ಶಂಭು ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ಇಂದು ದೆಹಲಿ ಪ್ರವೇಶಿಸಲು ಯತ್ನಿಸಿದ ರೈತರ ಮೇಲೆ ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಶುಕ್ರವಾರ ಸಹ ದೆಹಲಿ ಗಡಿ ಪ್ರವೇಶಕ್ಕೆ ತಡೆ ನೀಡಲಾಗಿತ್ತು. ಆಗ ಸರ್ಕಾರದ ಜೊತೆಗಿನ ಮಾತುಕತೆ ಹೋರಾಟಗಾರರು ಪ್ರಯತ್ನಿಸಿದ್ದರು. ಆದರೆ ಸರ್ಕಾರದಿಂದ ಮಾತುಕತೆಗೆ ಆಹ್ವಾನ ಬಾರದ ಹಿನ್ನೆಲೆ ಇಂದು ಮತ್ತೆ ದೆಹಲಿ ಗಡಿ ಪ್ರವೇಶಕ್ಕೆ ಯತ್ನಿಸಿದರು. ಈ ವೇಳೆ ಹರಿಯಾಣ ಪೊಲೀಸರು ರೈತರನ್ನು ತಡೆಹಿಡಿದಿದ್ದು, ಇದೇ ಕಾರಣಕ್ಕೆ ವಾಗ್ವಾದವೂ ನಡೆಯಿತು. ಈ ವೇಳೆ ಪೊಲೀಸರು ಅಶ್ರುವಾಯು ಪ್ರಯೋಗಸಿದ್ದಾರೆ.
ಪಂಜಾಬ್-ಹರಿಯಾಣ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದು, ರೈತರನ್ನು ತಡೆಯಲು ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ. ಸೆಕ್ಷನ್ 163ರಡಿಯಲ್ಲಿ ನಿಷೇಧಾಜ್ಞೆಗಳು ಸಹ ಗಡಿಯಲ್ಲಿ ಜಾರಿಯಲ್ಲಿವೆ. ಶಂಭು ಹೊರತುಪಡಿಸಿ, ಪಂಜಾಬ್ ಮತ್ತು ಹರಿಯಾಣ ನಡುವಿನ ಖಾನೌರಿ ಗಡಿಯನ್ನು ಬಿಗಿಯಾದ ನಾಲ್ಕು ಪದರಗಳ ಭದ್ರತೆಯಲ್ಲಿ ಮುಚ್ಚಲಾಗಿದೆ, 13 ತುಕಡಿಗಳನ್ನು ನಿಯೋಜಿಸಲಾಗಿದೆ.