ಬಿಗ್ಬಾಸ್ ಮೇಲೆ ತ್ರಿವಿಕ್ರಮ್ ಆರೋಪ ಮಾಡಿದ ಹಿನ್ನೆಲೆ ಕಿಚ್ಚ ಸುದೀಪ್ ಕೆಂಡಕಾರಿದ್ದಾರೆ. ಸುದೀಪ್ ಜೊತೆಗೆ ಒಂದೇ ತಂಡದಲ್ಲಿ ಕ್ರಿಕೆಟ್ ಆಡುವ ತ್ರಿವಿಕ್ರಮ್, ಈ ವಾರ ಸುದೀಪ್ ಎದುರು ಪೆಚ್ಚಾಗಿ ನಿಂತುಕೊಳ್ಳುವಂತಾಯ್ತು. ಅದಕ್ಕೆ ಕಾರಣ ಅವರೇ ಆಡಿದ ಕೆಲವು ಮಾತುಗಳು. ಶೋ ಆರಂಭವಾಗುತ್ತಿದ್ದಂತೆ ಶೋಭಾ ಅನ್ನು ಕಳಿಸಿ ಇಬ್ಬರನ್ನು ಮನೆಯಲ್ಲಿಯೇ ಉಳಿಸಿಕೊಂಡಿದ್ದರ ಬಗ್ಗೆ ತ್ರಿವಿಕ್ರಮ್ ಆಡಿದ ಮಾತುಗಳ ಬಗ್ಗೆ ಸುದೀಪ್ ತೀವ್ರವಾಗಿ ಸಿಟ್ಟಾಗಿದ್ದರು. ಆ ವಿಷಯದಲ್ಲಿ ತ್ರಿವಿಕ್ರಮ್ ಅನ್ನು ತರಾಟೆಗೆ ತೆಗೆದುಕೊಂಡರು.
ಅದಾದ ಬಳಿಕ ತ್ರಿವಿಕ್ರಮ್ ಅವರ ಮತ್ತೊಂದು ವಿಡಿಯೋ ಪ್ರಸಾರ ಮಾಡಿದರು ಸುದೀಪ್. ವಿಡಿಯೋನಲ್ಲಿ ಈ ವಾರ ನಡೆದ ಟಾಸ್ಕ್ ಒಂದರ ಬಗ್ಗೆ ಭವ್ಯಾ ಎದುರು ಕೂತು ವಿಶ್ಲೇಷಣೆ ಮಾಡುತ್ತಿದ್ದ ತ್ರಿವಿಕ್ರಮ್, ಆಟದಲ್ಲಿ ನಾವು ಹೆಚ್ಚು ಬಾರಿ ಗೆದ್ದಿದ್ದೇವೆ ಆದರೆ ಅವರಿಗೆ ಹೆಚ್ಚು ಪಾಯಿಂಟ್ಸ್ ಕೊಟ್ಟಿದ್ದಾರೆ. ನಾವು ಸೋತಿಲ್ಲ ಆದರೆ ಅವರನ್ನು ಗೆಲ್ಲಿಸಿದ್ದಾರೆ ಎಂದು ಹೇಳಿದರು. ಈ ವಿಷಯ ಸುದೀಪ್ ಅವರನ್ನು ಇನ್ನಷ್ಟು ಸಿಟ್ಟಿಗೇಳುವಂತೆ ಮಾಡಿತು.
ಗೆಲ್ಲಿಸಿದರು’ ಎಂದರೆ ಏನು ಅರ್ಥ ಎಂದು ಏರು ಧನಿಯಲ್ಲಿ ಪ್ರಶ್ನಿಸಿದರು ಸುದೀಪ್, ತ್ರಿವಿಕ್ರಮ್ ಏನೋ ಸ್ಪಷ್ಟನೆ ಕೊಡಲು ಯತ್ನಿಸಿದರಾದರು ಅವರಿಗೆ ಸಾಧ್ಯವಾಗಲಿಲ್ಲ. ಇದಕ್ಕೆಂದೇ ನಾವು ರೂಲ್ ಬುಕ್ ಕಳಿಸಿರುತ್ತೇವೆ. ಅದರಲ್ಲಿ ಪಾಯಿಂಟ್ಸ್ಗಳು ಹೇಗೆ ವಿತರಣೆ ಆಗುತ್ತವೆ, ಯಾವ ಟಾಸ್ಕ್ಗೆ ಎಷ್ಟು ಅಂಕ, ಗೆಲ್ಲಲು ಎಷ್ಟು ಅಂಕ ಬೇಕಾಗುತ್ತದೆ ಎಲ್ಲವೂ ಇರುತ್ತದೆ ಅದನ್ನು ಓದಿಯೂ ಸಹ ಇನ್ನೊಂದು ತಂಡವನ್ನು ಬಿಗ್ಬಾಸ್ ಗೆಲ್ಲಿಸಿದ್ದಾರೆ ಎಂದು ಹೇಳಿದ್ದು ಏಕೆ ಎಂದು ಪ್ರಶ್ನೆ ಮಾಡಿದರು. ಅಲ್ಲದೆ ತ್ರಿವಿಕ್ರಮ್ ಅನುಮಾನ ವ್ಯಕ್ತಪಡಿಸಿದ್ದ ಟಾಸ್ಕ್ನ ಪಾಯಿಂಟ್ಸ್ ಟೇಬಲ್ನ ಚಿತ್ರವನ್ನು ಪ್ರದರ್ಶಿಸಿ ಪಾಯಿಂಟ್ಸ್ ಹೇಗೆ ವಿತರಣೆ ಆಗಿದೆ ಎಂದು ವಿವರಣೆ ಸಹ ನೀಡಿದರು