ಪ್ಯಾರಿಸ್ : ಅವಿಶ್ವಾಸ ಗೊತ್ತುವಳಿಯಲ್ಲಿ ಪ್ರಧಾನಿ ಬಾರ್ನೆರ್ ಸರಕಾರ ಪದಚ್ಯುತಗೊಂಡಿರಬಹುದು. ಆದರೆ ತಾನು 2027ರಲ್ಲಿ ಅಧಿಕಾರಾವಧಿ ಮುಗಿಯುವವರೆಗೂ ಅಧಿಕಾರದಲ್ಲಿ ಮುಂದುವರಿಯುತ್ತೇನೆ. ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರೋನ್ ತಿಳಿಸಿದ್ದಾರೆ.
ದೇಶವನ್ನುದ್ದೇಶಿಸಿ ಮಾತನಾಡಿದ ಮ್ಯಾಕ್ರೋನ್ `ಬಜೆಟ್ ತಯಾರಿಕೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಬಾರ್ನೆರ್ ಅವರ ಉತ್ತರಾಧಿಕಾರಿಯನ್ನು ಮುಂದಿನ ದಿನಗಳಲ್ಲಿ ಹೆಸರಿಸಲಾಗುವುದು. ಪ್ರಧಾನಿ ಹುದ್ದೆಗೆ ಬಾರ್ನೆರ್ ನೀಡಿರುವ ರಾಜೀನಾಮೆಯನ್ನು ಅಂಗೀಕರಿಸಿದ್ದು ನೂತನ ಪ್ರಧಾನಿಯನ್ನು ಆಯ್ಕೆ ಮಾಡುವವರೆಗೆ ಅವರು ಉಸ್ತುವಾರಿಯಾಗಿ ಮುಂದುವರಿಯಲಿದ್ದಾರೆ ‘ ಎಂದರು.
ದೇಶದಲ್ಲಿ ಎದುರಾಗಿರುವ ರಾಜಕೀಯ ಬಿಕ್ಕಟ್ಟಿಗೆ ತಾನು ಕಾರಣ ಎಂಬ ವಿಪಕ್ಷಗಳ ಆರೋಪವನ್ನು ನಿರಾಕರಿಸಿದ ಮ್ಯಾಕ್ರೋನ್ ` ಕ್ರಿಸ್ಮಸ್ಗೂ ಮುನ್ನ ರಾಜಕೀಯ ಗೊಂದಲ ಹುಟ್ಟುಹಾಕಲು ಕಟ್ಟಾ ಬಲಪಂಥೀಯ ಮತ್ತು ಎಡಪಂಥೀಯ ಪಕ್ಷಗಳು ಪಿತೂರಿ ನಡೆಸಿ, ರಿಪಬ್ಲಿಕನ್ ವಿರೋಧಿ ಕೂಟ ರಚಿಸಿಕೊಂಡಿವೆ. ವಿಭಜನೆಯಾಗಲು ನಾವು ಅವಕಾಶ ನೀಡುವುದಿಲ್ಲ. ಆ ಕಾರಣದಿಂದಲೇ ಮುಂದಿನ ದಿನಗಳಲ್ಲಿ ನೂತನ ಪ್ರಧಾನಿಯನ್ನು ನೇಮಕ ಮಾಡುತ್ತೇವೆ. ನನಗೆ 2027ರ ಮೇ ತಿಂಗಳಿನವರೆಗೆ ಕೆಲಸ ಮಾಡಲು ಜನಾದೇಶವಿದೆ. ಆದ್ದರಿಂದ ಸರಕಾರದಲ್ಲಿ ಪಾಲ್ಗೊಳ್ಳಲು ಬಯಸುವ ಅಥವಾ ಸರಕಾರವನ್ನು ಉರುಳಿಸಲು ಬಯಸದ ಹಲವು ಪಕ್ಷಗಳ ಬೆಂಬಲ ಪಡೆದು ಸರಕಾರ ರಚಿಸಲಾಗುವುದು ‘ ಎಂದು ಹೇಳಿದ್ದಾರೆ. ಮ್ಯಾಕ್ರೋನ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ರಕ್ಷಣಾ ಸಚಿವ ಸೆಬಾಸ್ಟಿಯನ್ ಲೆಕೋರ್ನು ಅಥವಾ, ಆಂತರಿಕ ಸಚಿವ ಬೆರ್ನಾರ್ಡ್ ಕ್ಯಾಝೆನ್ಯುವ್ ಪ್ರಧಾನಿಯಾಗಿ ಆಯ್ಕೆಗೊಳ್ಳುವ ಸಾಧ್ಯತೆಯಿದೆ.