ಭಾರತ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳು ಈವರೆಗೆ 53 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಆಸ್ಟ್ರೇಲಿಯಾ ತಂಡವು 43 ಮ್ಯಾಚ್ಗಳಲ್ಲಿ ಜಯ ಸಾಧಿಸಿದರೆ, ಟೀಮ್ ಇಂಡಿಯಾ ಗೆದ್ದಿರುವುದು ಕೇವಲ 10 ಬಾರಿ ಮಾತ್ರ. ಇಂದಿನಿಂದ ಮೊದಲ ಏಕದಿನ ಪಂದ್ಯ ಆರಂಭವಾಗಿದೆ. ಅಲೆನ್ ಬಾರ್ಡರ್ ಫೀಲ್ಡ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕಿ ಹರ್ಮನ್ಪ್ರೀತ್ ಕೌರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಭಾರತ ತಂಡದ ನಾಯಕಿಯ ನಿರ್ಧಾರ ತಪ್ಪು ಎಂಬುದನ್ನು ಆಸ್ಟ್ರೇಲಿಯಾ ಬೌಲರ್ಗಳು ಪವರ್ಪ್ಲೇನಲ್ಲೇ ನಿರೂಪಿಸಿದರು.
ಅತ್ಯುತ್ತಮ ದಾಳಿ ಸಂಘಟಿಸಿದ ಆಸೀಸ್ ವೇಗಿಗಳು ಮೊದಲ 10 ಓವರ್ನಲ್ಲೇ ಸ್ಮೃತಿ ಮಂಧಾನ (8), ಪ್ರಿಯಾ ಪುನಿಯಾ (3) ಹಾಗೂ ಹರ್ಲೀನ್ ಡಿಯೋಲ್ (19) ವಿಕೆಟ್ ಕಬಳಿಸಿದ್ದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕಿ ಹರ್ಮನ್ಪ್ರೀತ್ ಕೌರ್ 17 ರನ್ ಬಾರಿಸಿ ಔಟಾದರೆ, ಜೆಮಿಮಾ ರೊಡ್ರಿಗಾಸ್ 23 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
UAN ನಂಬರ್ ಇಲ್ಲದೆಯೇ PF ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ ಗೊತ್ತಾ.? ಇಲ್ಲಿದೆ ನೋಡಿ ಡಿಟೈಲ್ಸ್
ಆ ಬಳಿಕ ಬಂದ ರಿಚಾ ಘೋಷ್ 14 ರನ್ಗಳಿಸಿದ್ದು ಬಿಟ್ಟರೆ, ಉಳಿದ ಬ್ಯಾಟರ್ಗಳು ಒಂದಂಕಿ ಮೊತ್ತಗಳಿಸಲಷ್ಟೇ ಶಕ್ತರಾದರು. ಪರಿಣಾಮ ಟೀಮ್ ಇಂಡಿಯಾ 34.2 ಓವರ್ಗಳಲ್ಲಿ 100 ರನ್ಗಳಿಸಿ ಆಲೌಟ್ ಆಯಿತು.
50 ಓವರ್ಗಳಲ್ಲಿ 101 ರನ್ಗಳ ಸುಲಭ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡಕ್ಕೆ ಫೋಬೆ ಲಿಚ್ಫೀಲ್ಡ್ ಹಾಗೂ ಜಾರ್ಜಿಯಾ ವೋಲ್ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್ಗೆ 48 ರನ್ಗಳಿಸಿದ ಬಳಿಕ ಫೋಬೆ (35) ಔಟಾದರು. ಈ ವೇಳೆ ಕಣಕ್ಕಿಳಿದ ಎಲ್ಲಿಸ್ ಪೆರ್ರಿ (1) ಹಾಗೂ ಬೆತ್ ಮೂನಿ (1) ರೇಣುಕಾ ಸಿಂಗ್ ಎಸೆತಗಳಲ್ಲಿ ವಿಕೆಟ್ ಒಪ್ಪಿಸಿದರು.
ಟೀಮ್ ಇಂಡಿಯಾ ಬ್ಯಾಕ್ ಟು ಬ್ಯಾಕ್ 3 ವಿಕೆಟ್ ಕಬಳಿಸಿದರೂ ಮತ್ತೊಂದೆಡೆ ಜಾರ್ಜಿಯಾ ವೋಲ್ ಕ್ರೀಸ್ ಕಚ್ಚಿ ನಿಂತಿದ್ದರು. ಅಲ್ಲದೆ 42 ಎಸೆತಗಳಲ್ಲಿ ಅಜೇಯ 46 ರನ್ ಬಾರಿಸಿ 16.2 ಓವರ್ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಆಸ್ಟ್ರೇಲಿಯಾ ತಂಡವು 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಆಸ್ಟ್ರೇಲಿಯಾ ಮಹಿಳಾ ತಂಡ: ತಹ್ಲಿಯಾ ಮೆಕ್ಗ್ರಾತ್ (ನಾಯಕಿ), ಬೆತ್ ಮೂನಿ (ವಿಕೆಟ್ ಕೀಪತರ್), ಜಾರ್ಜಿಯಾ ವೋಲ್, ಎಲ್ಲಿಸ್ ಪೆರ್ರಿ, ಫೋಬೆ ಲಿಚ್ಫೀಲ್ಡ್, ಆಶ್ಲೀ ಗಾರ್ಡ್ನರ್, ಅನ್ನಾಬೆಲ್ ಸದರ್ಲ್ಯಾಂಡ್, ಅಲಾನಾ ಕಿಂಗ್, ಸೋಫಿ ಮೊಲಿನೆಕ್ಸ್, ಮೇಗನ್ ಶುಟ್, ಡಾರ್ಸಿ ಬ್ರೌನ್, ಜಾರ್ಜಿಯಾ ವೇರ್ಹ್ಯಾಮ್, ಕಿಮ್ ಗಾರ್ತ್.
ಭಾರತ ಮಹಿಳಾ ತಂಡ: ಹರ್ಮನ್ಪ್ರೀತ್ ಕೌರ್ (ನಾಯಕಿ), ಪ್ರಿಯಾ ಪುನಿಯಾ, ಸ್ಮೃತಿ ಮಂಧಾನ, ಜೆಮಿಮಾ ರೊಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಅರುಂಧತಿ ರೆಡ್ಡಿ, ರಾಧಾ ಯಾದವ್, ಪ್ರಿಯಾ ಮಿಶ್ರಾ, ರೇಣುಕಾ ಠಾಕೂರ್ ಸಿಂಗ್, ಟಿಟಾಸ್ ಸಾಧು, ಸೈಮಾ ಠಾಕೂರ್, ಮಿನ್ನು ಮಣಿ, ತೇಜಲ್ ಹಸಬ್ನಿಸ್, ಉಮಾ ಚೆಟ್ರಿ, ಹರ್ಲೀನ್ ಡಿಯೋಲ್.