ದಕ್ಷಿಣ ಚಿತ್ರರಂಗದ ಖ್ಯಾತ ನಟ ನಾಗ ಚೈತನ್ಯ ಹಾಗೂ ಬಹುಭಾಷಾ ನಟಿ ಶೋಭಿತಾ ಧೂಳಿಪಾಲ ಹೈದರಾಬಾದ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಾಗಾರ್ಜುನ್ ಒಡೆತನದ ಅನ್ನಪೂರ್ಣ ಸ್ಟುಡಿಯೋದಲ್ಲಿ ನಾಗಚೈತನ್ಯ ಹಾಗೂ ಶೋಭಿತಾ ಸಾಂಪ್ರದಾಯಿಕ ಹಿಂದೂ ಶೈಲಿಯಲ್ಲಿ ಹಸೆಮಣೆ ಏರಿದರು.
ನಾಗ ಚೈತನ್ಯ, ಶೋಭಿತಾ ಮದುವೆ ಸಮಾರಂಭದಲ್ಲಿ ಕುಟುಂಬದವರು, ಚಿತ್ರರಂಗದ ಗಣ್ಯರು, ಆಪ್ತರು, ಬಂಧುಗಳು ಪಾಲ್ಗೊಂಡಿದ್ದರು. ಮೆಗಾಸ್ಟಾರ್ ಚಿರಂಜೀವಿ ಕೂಡಾ ಮದುವೆ ಸಮಾರಂಭದಲ್ಲಿ ಭಾಗವಹಿಸಿ ನವದಂಪತಿಗಳನ್ನು ಆಶೀರ್ವದಿಸಿದರು.
‘ನಾಗ ಚೈತನ್ಯ ಮತ್ತು ಶೋಭಿತಾ ಜೀವನದ ಹೊಸ ಅಧ್ಯಾಯ ಆರಂಭಿಸುತ್ತಿರುವುದನ್ನು ನೋಡಲು ಖುಷಿ ಆಗುತ್ತದೆ. ಇದು ನನಗೆ ಒಂದು ಭಾವನಾತ್ಮಕ ಕ್ಷಣ. ನಾಗ ಚೈತನ್ಯಗೆ ಅಭಿನಂದನೆಗಳು. ನಮ್ಮ ಕುಟುಂಬಕ್ಕೆ ಶೋಭಿತಾಗೆ ಸ್ವಾಗತ. ನೀನು ಈಗಾಗಲೇ ನಮ್ಮ ಬದುಕಿನಲ್ಲಿ ಸಾಕಷ್ಟು ಖುಷಿ ತಂದಿರುವೆ’ ಎಂದು ಅಕ್ಕಿನೇನಿ ನಾಗಾರ್ಜುನ ಬರೆದುಕೊಂಡಿದ್ದಾರೆ.
ಅಕ್ಕಿನೇನಿ ನಾಗೇಶ್ವರ ರಾವ್ ಅವರ ಮೂರ್ತಿಯ ಕೆಳಗೆ ಮದುವೆ ನಡೆದಿರುವುದು ವಿಶೇಷ ಎಂದು ನಾಗಾರ್ಜುನ ಅವರು ಹೇಳಿದ್ದಾರೆ.
ನಾಗ ಚೈತನ್ಯ ಹಾಗೂ ಶೋಭಿತಾ ಇಬ್ಬರೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ಮಧ್ಯೆ ಪರಿಚಯ ಬೆಳೆದು ಈಗ ಮದುವೆ ಆಗಿ ಹೊಸ ಜೀವನ ಆರಂಭಿಸಿದ್ದಾರೆ. ಅನೇಕ ಸೆಲೆಬ್ರಿಟಿಗಳು ದಂಪತಿಗೆ ಶುಭಾಶಯ ಕೋರಿದ್ದಾರೆ.