ಹುಬ್ಬಳ್ಳಿ: ಇಲ್ಲಿನ ಹಳೇಹುಬ್ಬಳ್ಳಿ ಆನಂದನಗರ ಅಂಬಾಭವಾನಿ ಗುಡಿ ಬಳಿ ನ. 19ರಂದು ನಡೆದಿದ್ದ ವ್ಯಕ್ತಿಯ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು, ಮೃತನು ಬರೆದಿಟ್ಟಿರುವ ಡೆತ್ನೋಟ್ ಪತ್ತೆಯಾಗಿದೆ. ಅದರಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಆರೋಪ ಮಾಡಿರುವ ಬಗ್ಗೆ ಮೃತನ ಪತ್ನಿ ಹಳೇಹುಬ್ಬಳ್ಳಿ ಠಾಣೆಗೆ ದೂರು ಕೊಟ್ಟಿದ್ದಾರೆ.
ಗಾಡಿ ರಿಪೇರಿ ಮತ್ತು ಮಾರಾಟ ಮಾಡಿಕೊಂಡಿದ್ದ ಆನಂದನಗರದ ಮಾಂತೇಶ ಪರಶುರಾಮ ಕಲಾಲ (39) ಬೈಕ್ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನು ಮೇಲೆ ಬಿಡುಗಡೆಯಾಗಿದ್ದರು. ನಂತರ ಮಾನಸಿಕವಾಗಿ ನೊಂದು ನ. 19ರಂದು ಮನೆ ಬಳಿಯ ಶೆಡ್ನಲ್ಲಿ ನೇಣು ಹಾಕಿಕೊಂಡು ತೀವ್ರ ಅಸ್ವಸ್ಥಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಿದ್ದಾಗ ಚಿಕಿತ್ಸೆ ಫಲಿಸದೆ ನ. 22ರಂದು ಕೆಎಂಸಿಆರ್ಐ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆಗ ಅವರ ಪತ್ನಿಯು ಪತಿಯ ಸಾವಿನಲ್ಲಿ ಯಾವುದೇ ಸಂಶಯವಿಲ್ಲವೆಂದು ಹಳೇಹುಬ್ಬಳ್ಳಿ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಆದರೆ ಹಳೇಹುಬ್ಬಳ್ಳಿ ಪೊಲೀಸರಿಗೆ ಮತ್ತೊಂದು ದೂರು ಸಲ್ಲಿಸಿದ್ದು, ನನ್ನ ಪತಿಯ ಸಾವಿಗೆ ಪೊಲೀಸರು ಕೊಟ್ಟ ಹಿಂಸೆಯೇ ಕಾರಣವೆಂದು ಆರೋಪಿಸಿದ್ದಾರೆ. ಗಂಡನ ಸಾವಿನ 13ನೇ ದಿನದ ಕಾರ್ಯ ಮಾಡಲೆಂದು ಮನೆ ಸ್ವಚ್ಛಗೊಳಿಸುವಾಗ ಗಂಡ ಬರೆದಿರುವ ಮರಣ ಪತ್ರ ಸಿಕ್ಕಿದ್ದು, ಅದರಲ್ಲಿ ನಾನು ನಿರಪರಾಧಿ ಆಗಿದ್ದರೂ ಪೊಲೀಸರು ವಾಹನ ಕದ್ದಿರುವೆ ಎಂದು ನಾಲ್ಕು ದಿನ ಕೂಡಿಹಾಕಿ ಹೊಡೆ-ಬಡಿ ಮಾಡಿದರು. ಸಾರಾಯಿ ಕುಡಿಸಿ ತುಂಬಾ ಕಿರುಕುಳ ಕೊಟ್ಟರು.
ಅಲ್ಲದೆ ಹಣಕ್ಕಾಗಿ ಬೇಡಿಕೆ ಇಟ್ಟರು. ಕೊಡದಿದ್ದಾಗ ಕೇಸ್ ಹಾಕಿದರು. ಪೊಲೀಸರು ನನಗೆ ತುಂಬಾ ಕ್ರೂರವಾಗಿ ಹಿಂಸೆ ಕೊಟ್ಟಿದ್ದಾರೆ. ನನ್ನ ಸಾವಿಗೆ ಉಪನಗರ ಠಾಣೆಯ ಅಧಿಕಾರಿಗಳು ಮತ್ತು ಕ್ರೈಂ ಪೊಲಿಸರೇ ಕಾರಣವೆಂದು ತಿಳಿಸಿದ್ದಾರೆ. ಕಾರಣ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಈ ಪ್ರಕರಣದಲ್ಲಿ ನ್ಯಾಯ ಒದಗಿಸಿಕೊಡಬೇಕೆಂದು ಮೃತ ಮಾಂತೇಶರ ಪತ್ನಿ ಪೂಜಾ ಕಲಾಲ (ಪರಂಡೆಕರ) ಮರು ದೂರು ಕೊಟ್ಟಿದ್ದಾರೆ.