ಸ್ಯಾಂಡಲ್ ವುಡ್ ನ ಹಿರಿತೆರೆ ಹಾಗೂ ಕಿರುತೆರೆ ನಟಿ ಶೋಭಿತಾ ಶಿವಣ್ಣ ಭಾನುವಾರ ಹೈದರಾಬಾದ್ ನ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶೋಭಿತಾ ಶವವನ್ನು ಅವರ ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ. ಶೋಭಿತಾ ಪ್ರತಿ ಬಾರಿ ಊರಿಗೆ ಬಂದಾಗ ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಇದೀಗ ಶೋಭಿತಾ ಅವರ ಮೃತದೇಹವನ್ನು ನೋಡಿದ ನೂರಾರು ಸ್ನೇಹಿತರು, ಬಂಧುಗಳು ಕಣ್ಣೀರು ಹಾಕಿದ್ದಾರೆ.
ಕಳೆದ 2 ದಿನಗಳ ಹಿಂದೆ ಕಿರುತೆರೆ ನಟಿ ಶೋಭಿತಾ ಶಿವಣ್ಣ ಅವರು ಹೈದರಾಬಾದ್ನಲ್ಲಿ ಸಾವನ್ನಪ್ಪಿದ್ದರು. ಪೋಸ್ಟ್ ಮಾರ್ಟಂ ಹಾಗೂ ಪೊಲೀಸರ ಪರಿಶೀಲನೆ ಬಳಿಕ ಮೃತದೇಹವನ್ನು ಶೋಭಿತಾ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.
ಶೋಭಿತಾ ಶಿವಣ್ಣ ಅವರ ಮೃತದೇಹವನ್ನು ಇಂದು ಸಕಲೇಶಪುರ ತಾಲ್ಲೂಕಿನ ಹೇರೂರಿಗೆ ತರಲಾಗಿತ್ತು. ನೂರಾರು ಸ್ನೇಹಿತರು, ಅಕ್ಕಂದಿರು, ಕುಟುಂಬ ಸದಸ್ಯರು ಅಗಲಿದ ನಟಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ತಮ್ಮೂರಿನ ಮಗಳನ್ನ ಕಳೆದುಕೊಂಡಿದ್ದಕ್ಕೆ ಹುಟ್ಟೂರಿನ ಜನ ಕಣ್ಣೀರಿಟ್ಟಿದ್ದಾರೆ.
ಬಹಳ ಕಷ್ಟದಲ್ಲಿ ಬೆಳೆದ ಶೋಭಿತಾ ಶಿವಣ್ಣ ಅವರು ಹುಟ್ಟೂರಿನಲ್ಲಿ ಒಂದು ಮನೆಯನ್ನು ಕಟ್ಟಿಸಿದ್ದರು. ಮದುವೆಯಾಗಿ ಒಂದೂವರೆ ವರ್ಷ ಆಗಿತ್ತು ಅಷ್ಟೇ. ದೇವರ ಕಾರ್ಯಕ್ಕೆ ಬಂದು ಹೋಗುತ್ತಿದ್ದರು. ಶೋಭಿತಾ ಅವರು ಸಾಕಷ್ಟು ಎತ್ತರಕ್ಕೆ ಬೆಳೆಯಬೇಕಿತ್ತು. ಅಕ್ಕ-ತಂಗಿಯರು, ಮನೆಯವರು ಸಾಕಷ್ಟು ಪ್ರೋತ್ಸಾಹ ನೀಡಿದ್ದರು ಎಂದು ಮಾಜಿ ಗ್ರಾಮ ಪಂಚಾಯ್ತಿ ಸದಸ್ಯರು ಶೋಭಿತಾ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಶೋಭಿತಾ ಅವರ ತಂದೆಯ ಜಮೀನಿನಲ್ಲಿ ಕುಟುಂಬ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.