ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಕಲಹ ತಾರಕಕ್ಕೇರುತ್ತಿದೆ. ಒಂದು ಕಡೆ ದೆಹಲಿಯಲ್ಲಿ ಬೀಡು ಬಿಟ್ಟ ಯತ್ನಾಳ್ ಟೀಂ ವರಿಷ್ಟರ ಭೇಟಿಯಾಗಿದೆ. ಇನ್ನೊಂದೆಡೆ ಬೆಂಗಳೂರಿನಲ್ಲಿ ಕೋರ್ ಕಮಿಟಿ ಸಭೆ ನಡೆದಿದೆ. ಆಂತರಿಕ ಭಿನ್ನಮತದ ಕುರಿತು ವರದಿ ಪಡೆಯಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಆಗಮನಿಸಿದ್ದು, ಅವರ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆದಿದೆ. ನಾಲ್ಕು ಗಂಟೆಗಳ ಕಾಲ ನಡೆದ ಕೋರ್ ಕಮಿಟಿ ಸಭೆಯಲ್ಲಿ ಆಂತರಿಕ ಕಲಹದ ಬಗ್ಗೆ ಚರ್ಚೆಯಾಗಿದೆ ಎನ್ನಲಾಗುತ್ತಿದೆ.
ತರುಣ್ ಚುಗ್ ಎದುರು ಯತ್ನಾಳ್ ಹೆಸರು ಹೇಳದೇ ದೂರು ದುಮ್ಮಾನ ತೋಡಿಕೊಂಡಿದ್ದು, ಕ್ರಮಕ್ಕೆ ಕೂಡ ಆಗ್ರಹಿಸಿದ್ದಾರೆ ಎನ್ನಲಾಗಿದೆ. ರಾಜ್ಯಾಧ್ಯಕ್ಷರನ್ನು ಹೈಕಮಾಂಡ್ ನೇಮಿಸಿದೆ. ಯಾರಿಗೆ ವ್ಯತ್ಯಾಸವಿದ್ದರೂ ಕುಳಿತು ಚರ್ಚಿಸಲಿ, ಆದರೆ ಮಾಧ್ಯಮದ ಎದುರು ಹೇಳಿಕೊಳ್ಳುವುದೇಕೆ , ಇದರಿಂದ ಪಕ್ಷಕ್ಕೆ ಮುಜುಗರ ಆಗುತ್ತಿದೆ. ಇದನ್ನು ಸರಿಪಡಿಸಬೇಕು ಎಂದು ತರುಣ್ ಚುಗ್ ಎದುರೇ ಒಂದಷ್ಟು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.