ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಪ್ಪಿಗೆ ಸೂಚಿಸಿದೆ. ಈ ವಿಷಯ ಕುರಿತು ನಡೆದ ಕೌನ್ಸಿಲ್ ಸಭೆಯಲ್ಲಿ ಭಾರತ ಆಡುವ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಯೋಜಿಸಲು ಒಪ್ಪಿರುವುದಾಗಿ ಪಿಸಿಬಿಯು ಐಸಿಸಿಗೆ ತಿಳಿಸಿದೆ. ಆದರೆ, ಅದಕ್ಕೆ ಕೆಲವು ಷರತ್ತುಗಳನ್ನೂ ವಿಧಿಸಿದೆ.
ಟೂರ್ನಿ ವಿಚಾರಕ್ಕೆ ಭಾರತ-ಪಾಕಿಸ್ತಾನ ನಡುವೆ ಹಗ್ಗಜಗ್ಗಾಟ ನಡೆದಿತ್ತು. ಭದ್ರತಾ ಕಾರಣಗಳಿಗಾಗಿ ಪಾಕಿಸ್ತಾನಕ್ಕೆ ಆಡಲು ಹೋಗುವುದಿಲ್ಲ ಎಂದು ನಿರಾಕರಿಸಿತ್ತು. ಆಗ, ಹೈಬ್ರಿಡ್ ಮಾದರಿಯ ಚಾಂಪಿಯನ್ಸ್ ಟ್ರೋಫಿ ನಡೆಸಲು ಐಸಿಸಿ ಪಾಕಿಸ್ತಾನಕ್ಕೆ ಸಲಹೆ ನೀಡಿತ್ತು. ಈಗ ಪಾಕಿಸ್ತಾನ ಒಪ್ಪಿಗೆ ಸೂಚಿಸಿದ್ದು, ಮೂರು ಷರತ್ತುಗಳನ್ನು ವಿಧಿಸಿದೆ ಎಂದು ವರದಿಯಾಗಿದೆ.
ಭಾರತದ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಭಾರತ ಫೈನಲ್ಗೆ ಲಗ್ಗೆಯಿಟ್ಟರೆ ಅದು ಕೂಡ ದುಬೈನಲ್ಲೇ ನಡೆಯಲಿದೆ. ಒಂದು ವೇಳೆ, ಟೀಂ ಇಂಡಿಯಾ ಗ್ರೂಪ್ ಸ್ಟೇಜ್ ದಾಟದಿದ್ದರೆ ಸೆಮಿಫೈನಲ್ ಮತ್ತು ಫೈನಲ್ ಪಂದ್ಯ ಪಾಕ್ನ ಲಾಹೋರ್ನಲ್ಲೇ ನಡೆಯಲಿದೆ. ಭಾರತದಲ್ಲಿ ಮುಂದಿನ ದಿನಗಳಲ್ಲಿ ಐಸಿಸಿ ಪಂದ್ಯ ಆಯೋಜಿಸಿದರೆ ಪಾಕಿಸ್ತಾನದ ಪಂದ್ಯಗಳು ತಟಸ್ಥ ಕೇಂದ್ರಗಳಿಗೆ ವರ್ಗಾಯಿಸಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಐಸಿಸಿ ನಡೆಸಿದ ಸಭೆಯಲ್ಲಿ ಷರತ್ತುಗಳನ್ನು ಹಾಕಿದೆ.
ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ!
ಮುಂದಿನ ವರ್ಷ ಫೆಬ್ರವರಿ-ಮಾರ್ಚ್ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗಾಗಿ ಹೈಬ್ರಿಡ್ ಮಾದರಿಯ ಚರ್ಚೆಯ ನಡುವೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಮುಬಾಶಿರ್ ಉಸ್ಮಾನಿಯನ್ನು ದುಬೈನಲ್ಲಿ ಭೇಟಿಯಾದರು. ಸಭೆಗೆ ಸಂಬಂಧಿಸಿದಂತೆ ಪಿಸಿಬಿ ಹೇಳಿಕೆಯ ಪ್ರಕಾರ, ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಲು ಪಾಕಿಸ್ತಾನ ಸಿದ್ಧವಾಗಿದೆ. ಎಲ್ಲಾ ಸಿದ್ಧತೆಗಳು ವೇಳಾಪಟ್ಟಿಯಲ್ಲಿದೆ ಎಂದು ನಖ್ವಿ ಉಸ್ಮಾನಿಗೆ ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಪರಿಸ್ಥಿತಿ ಸ್ಥಿರವಾಗಿದೆ. ಮೆಗಾ-ಈವೆಂಟ್ನಲ್ಲಿ ಭಾಗವಹಿಸುವ ಎಲ್ಲಾ ತಂಡಗಳಿಗೆ ರಾಜ್ಯ ಮಟ್ಟದ ಭದ್ರತೆಯನ್ನು ಒದಗಿಸಲಾಗುವುದು ಎಂದು ನಖ್ವಿ ಹೇಳಿದ್ದಾರೆ. ಪಂದ್ಯಾವಳಿಗೆ ಆತಿಥ್ಯ ವಹಿಸುವ ಕ್ರೀಡಾಂಗಣಗಳ ನಿರ್ಮಾಣ ಕಾರ್ಯವೂ ನಿಗದಿತ ಸಮಯಕ್ಕೆ ಸರಿಯಾಗಿದೆ. ಪಾಕಿಸ್ತಾನದ ಜನರು ದೇಶದಲ್ಲಿ ಉತ್ತಮ ತಂಡಗಳು ಮತ್ತು ಆಟಗಾರರು ಆಡುವುದನ್ನು ವೀಕ್ಷಿಸಲು ಎದುರು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.