ಅಂಗವಿಕಲರು ಕೂಡಾ ಮನುಷ್ಯರೇ. ಅವರಿಗೂ ಭಾವನೆಗಳಿವೆ, ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸುವ ಬೌದ್ಧಿಕ ಸಾಮರ್ಥ್ಯವಿದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಅವರನ್ನು ಪ್ರತ್ಯೇಕವಾಗಿ ಪರಿಗಣಿಸುವ ಪರಿಪಾಠವೂ ಕೆಲವೆಡೆ ಕಾಣಿಸುತ್ತಿದೆ. ಅಥವಾ ಕೆಲವೆಡೆ ಅವರಿಗೆ ಇನ್ನಿಲ್ಲದ ಅನುಕಂಪ ತೋರುವುದು ಇದೆ. ಇದು ತಪ್ಪು. ಅಂಗವಿಕಲರಿಗೂ ಸ್ವಾಭಿಮಾನದಿಂದ ಬದುಕುವ ಹಕ್ಕಿದೆ. ಅವರು ಸಮಾಜದ ಮುಖ್ಯವಾಹಿನಿಗಳಲ್ಲಿ ಗುರುತಿಸಿಕೊಳ್ಳಬಲ್ಲರು.
ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷ ಣಿಕ, ಮಾಹಿತಿ ತಂತ್ರಜ್ಞಾನ, ಮನೊರಂಜನೆ ಮುಂತಾದ ಕ್ಷೇತ್ರದಲ್ಲಿ ಗುರುತಿಸಬಲ್ಲರು. ವಿಶೇಷವಾದ ಸಾಧನೆಯನ್ನು ಮಾಡಬಲ್ಲರು. ಸಮಾಜದಲ್ಲಿ ಅವರ ಮಹತ್ವ ಜನರಿಗೆ ಗೊತ್ತಾಗಬೇಕು ಎಂಬ ಉದ್ದೇಶದಿಂದಲೇ ವರ್ಷದ ಒಂದು ದಿನವನ್ನು ಅವರಿಗಾಗಿ ಮೀಸಲಾಗಿರಿಸಲಾಗಿದೆ. ಅದುವೇ ಡಿಸೆಂಬರ್ 3. ಇದು ಜಗತ್ತಿನೆಲ್ಲೆಡೆ ವಿಶ್ವ ಅಂಗವಿಕಲ ದಿನವನ್ನಾಗಿ ಆಚರಿಸಲಾಗುತ್ತದೆ.
ವಿಶ್ವ ವಿಕಲಚೇತನರ ದಿನದ ಇತಿಹಾಸ:
ವಿಶ್ವಸಂಸ್ಥೆಯ ಸಾಮಾನ್ಯ ಸಭೆ 1981 ರ ವರ್ಷವನ್ನು ವಿಕಲಚೇತನರ ಅಂತಾರಾಷ್ಟ್ರೀಯ ವರ್ಷವೆಂದು ಘೋಷಿಸಿತು. ವಿಕಲಚೇತನರಿಗೆ ಅವಕಾಶಗಳನ್ನು ಒದಗಿಸಲು ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಇದನ್ನು ಮಾಡಲಾಗಿದೆ. ಅಲ್ಲದೇ ಇದು ಅಂಗವಿಕಲರಿಗೆ ಸರಿಯಾದ ಪುನರ್ವಸತಿ ಕಲ್ಪಿಸುವ ಗುರಿಯನ್ನು ಹೊಂದಿದೆ ಮತ್ತು ಭವಿಷ್ಯದಲ್ಲಿ ಅಂಗವೈಕಲ್ಯವನ್ನು ತಡೆಗಟ್ಟಲು ಪ್ರಯತ್ನಿಸುತ್ತದೆ.
1981ರಲ್ಲಿ ಅಂತಾರಾಷ್ಟ್ರೀಯ ವಿಕಲಚೇತನರು ವರ್ಷದ ವಿಷಯವೆಂದರೆ “ಪೂರ್ಣ ಭಾಗವಹಿಸುವಿಕೆ ಮತ್ತು ಸಮಾನತೆ”. ನಂತರ ಸಾಮಾನ್ಯ ಸಭೆ 1983 ರಿಂದ 1992 ರ ನಡುವಿನ ಅವಧಿಯನ್ನು ವಿಶ್ವಸಂಸ್ಥೆಯ ವಿಕಲಚೇತನರ ದಶಕ ಎಂದು ಘೋಷಿಸಿತು. ವರ್ಲ್ಡ್ ಪ್ರೋಗ್ರಾಂ ಆಫ್ ಆ್ಯಕ್ಷನ್ ಸಮಯದಲ್ಲಿ ಶಿಫಾರಸು ಮಾಡಲಾದ ಚಟುವಟಿಕೆಗಳನ್ನು ಕಾರ್ಯಗತಗೊಳಿಸಲು ವಿವಿಧ ಸಂಸ್ಥೆಗಳು ಮತ್ತು ಸರ್ಕಾರಗಳಿಗೆ ಸಮಯವನ್ನು ನೀಡಲು ಇದನ್ನು ಮಾಡಲಾಗಿದೆ. 1998ರಲ್ಲಿ ಇಡೀ ಜಗತ್ತು ಈ ದಿನವನ್ನು ವಿಕಲಾಂಗ ವ್ಯಕ್ತಿಗಳ ಅಂತಾರಾಷ್ಟ್ರೀಯ ದಿನವೆಂದು ಆಚರಿಸಲು ಪ್ರಾರಂಭಿಸಿತು.
ವಿಕಲಚೇತನು ಎಂದರೇನು?:
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ವಿಕಲಚೇತನರವನ್ನು ಜಾಗತಿಕ ಸಾರ್ವಜನಿಕ ಆರೋಗ್ಯ ಸಮಸ್ಯೆ, ಮಾನವ ಹಕ್ಕುಗಳ ಸಮಸ್ಯೆ ಮತ್ತು ಅಭಿವೃದ್ಧಿ ಆದ್ಯತೆಯಾಗಿ ಗುರುತಿಸಿದೆ. WHO ‘ಅಂಗವೈಕಲ್ಯ’ ವನ್ನು“ ದೌರ್ಬಲ್ಯ, ಚಟುವಟಿಕೆಯನ್ನು ಮಿತಿಗೊಳಿಸುವುದು ಮತ್ತು ಭಾಗವಹಿಸುವಿಕೆಯಲ್ಲಿ ನಿರ್ಬಂಧ ಇರುವುದು ಎಂದು ಹೇಳುತ್ತದೆ. ಇದು ವ್ಯಕ್ತಿಯ (ಆರೋಗ್ಯ ಸ್ಥಿತಿಯೊಂದಿಗೆ) ಮತ್ತು ವ್ಯಕ್ತಿಯ ಸಂದರ್ಭೋಚಿತ (ಪರಿಸರ ಮತ್ತು ವೈಯಕ್ತಿಕ) ಅಂಶಗಳ ನಡುವಿನ ಪರಸ್ಪರ ಕ್ರಿಯೆಯ ಋಣಾತ್ಮಕ ಅಂಶಗಳನ್ನು ಸೂಚಿಸುತ್ತದೆ. ಅಂಗವೈಕಲ್ಯವು ಕೇವಲ ಜೈವಿಕ ಅಥವಾ ಸಾಮಾಜಿಕ ವಿದ್ಯಮಾನವಲ್ಲ.
ಪ್ರತಿ ವರ್ಷ ಡಿಸೆಂಬರ್ 3ರಂದು ಅಂತಾರಾಷ್ಟ್ರೀಯ ವಿಕಲಚೇತನರ ದಿನವನ್ನು ಆಚರಿಸಲಾಗುತ್ತದೆ. ಇದನ್ನು 1992 ರಲ್ಲಿ ವಿಶ್ವಸಂಸ್ಥೆಯ ಅಸೆಂಬ್ಲಿ ರೆಸಲ್ಯೂಷನ್ 47/3 ರಿಂದ ಘೋಷಿಸಲಾಯಿತು. ಇದನ್ನು 2007ರಿಂದ ‘ ವಿಕಲಚೇತನರ ಅಂತಾರಾಷ್ಟ್ರೀಯ ದಿನ’ ಎಂದು ಕರೆಯಲಾಗುತ್ತಿತ್ತು. ಸಾರ್ವಜನಿಕ ಜಾಗೃತಿ, ತಿಳಿವಳಿಕೆ ಮತ್ತು ವಿಕಲಚೇತನತೆಯನ್ನು ಸ್ವೀಕಾರ ಮಾಡುವ ಬಗ್ಗೆ ಈ ದಿನದಂದು ಜಾಗೃತಿ ಮೂಡಿಸಲಾಗುತ್ತದೆ. ಅವರ ಕೊಡುಗೆಗಳು,ಸಾಧನೆಗಳು, ಅಂಗವಿಕಲರ ಘನತೆ, ಹಕ್ಕುಗಳು ಮತ್ತು ಯೋಗಕ್ಷೇಮಕ್ಕೆ ಬೆಂಬಲವನ್ನು ಸಜ್ಜುಗೊಳಿಸುವ ಉದ್ದೇಶವೂ ಈ ದಿನದಲ್ಲಿದೆ.