ಬೆಂಗಳೂರು, ಡಿ. 2: ಕುಣಿಗಲ್ ಶಾಸಕ ಡಾ. ಎಚ್ ಡಿ ರಂಗನಾಥ್ ಅವರ ತಂದೆ ಡಾ. ಎಚ್ ಆರ್ ದೊಡ್ಡಯ್ಯ ಅವರು ದೀರ್ಘಕಾಲದ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಮೃತರಿಗೆ ಪತ್ನಿ ಲಕ್ಷ್ಮಮ್ಮ, ಪುತ್ರರಾದ ಶಾಸಕ ಡಾ. ಎಚ್ ಡಿ ರಂಗನಾಥ್, ಡಾ. ಎಚ್ ಡಿ ರಾಮಚಂದ್ರಪ್ರಭು, ಎಚ್ ಡಿ ಶ್ರೀನಿವಾಸ್, ಸೊಸೆಯಂದಿರು, ಮೊಮ್ಮಕ್ಕಳು ಇದ್ದಾರೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗದ ಆಲ್ಕೆರೆ ಹೊಸಹಳ್ಳಿ ಗ್ರಾಮದ ಮೂಲದವರಾದ ಡಾ. ಎಚ್ ಆರ್ ದೊಡ್ಡಯ್ಯ ಅವರು ಅರೇಳು ತಿಂಗಳಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದೆ ಇಂದು ಸಂಜೆ 7 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು.
ದೊಡ್ಡಯ್ಯ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಕುಣಿಗಲ್ ನ ಸ್ವಗ್ರಾಮ ಆಲ್ಕೆರೆ ಹೊಸಹಳ್ಳಿಯಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.
ಸಿಎಂ, ಡಿಸಿಎಂ ಸಂತಾಪ:
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್, ಅನೇಕ ಸಚಿವರು, ಸಂಸದರು, ಶಾಸಕರು ಡಾ. ದೊಡ್ಡಯ್ಯ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ದೊಡ್ಡಯ್ಯ ಅವರ ನಿಧನದ ವಿಷಯ ತಿಳಿಯುತ್ತಿದ್ದಂತೆ ಸಿಎಂ, ಡಿಸಿಎಂ, ಸಚಿವರು, ಸಂಸದರು, ಶಾಸಕ ಮಿತ್ರರು ಡಾ. ರಂಗನಾಥ್ ಅವರಿಗೆ ದೂರವಾಣಿ ಕರೆ ಮಾಡಿ ಸಾಂತ್ವನ, ಧೈರ್ಯ ಹೇಳಿದರು.