ಬಳ್ಳಾರಿ ಸೇರಿ ರಾಜ್ಯದ ಇತರೆ ಕಡೆಗಳಲ್ಲಿ ಉಂಟಾಗಿರುವ ಬಾಣಂತಿ ತಾಯಂದಿರ ಸಾವಿನ ಸುದ್ದಿ ತಲ್ಲಣ ಉಂಟು ಮಾಡಿದ್ದರೆ, ಕಳೆದ ಮೂರು ವರ್ಷದಲ್ಲಿ ಸಂಭವಿಸಿರುವ ಶಿಶುಗಳ ಮರಣ ಪ್ರಮಾಣವೂ ತೀವ್ರ ಕಳವಳಕ್ಕೆ ಕಾರಣವಾಗಿದೆ.
ಬಳ್ಳಾರಿ ಜಿಲ್ಲೆಯೊಂದರಲ್ಲಿ ಹದಿನೈದು ದಿನಗಳ ಅಂತರದಲ್ಲಿ ೫ ಜನ ಬಾಣಂತಿಯರು ಸಾವನಪ್ಪಿದ್ದಾರೆ. ಈ ಸರಣಿ ಸಾವು ಬೆಳಕಿಗೆ ಬರುತ್ತಿದ್ದಂತೆ ಸರಕಾರ ಸಾವಿನ ಹಿಂದಿನ ಸತ್ಯವನ್ನು ಬೇಧಿಸಿದ್ದು, ಹೊಣೆಗಾರರ ತಲೆದಂಡಕ್ಕೆ ಆದೇಶ ಮಾಡಿದೆ.
ಹೆಚ್ಚುವರಿ ತನಿಖೆಗೂ ಉನ್ನತ ಅಧಿಕಾರಿಗಳ ನೇತೃತ್ವದ ತಂಡ ರಚಿಸಿ ಸೂಚನೆಯೂ ನೀಡಿದೆ. ಆದರೆ ಕಳೆದ ೨೦೨೧ರಿಂದ ೨೦೨೪ರ ಅಕ್ಟೋಬರ್ ಅಂತ್ಯದವರೆಗೆ ಮೂರು ವರ್ಷಗಳಲ್ಲಿ ಒಟ್ಟು ೨೦೭೯ ಜನ ಬಾಣಂತಿ ತಾಯಿಯಂದಿರು ಮರಣ ಹೊಂದಿದ್ದಾರೆ. ಹೆರಿಗೆ ಸಂದರ್ಭದಲ್ಲಿಯೇ ಚಿಕಿತ್ಸೆ ಫಲಕಾರಿಯಾಗದೇ ೮೨೨ ಜನ ಬಾಣಂತಿಯರು ಸಾವನಪ್ಪಿದ್ದಾರೆ. ಈ ಸಾವುಗಳು ಸಹಜ?, ಅಸಹಜವೇ? ಎನ್ನುವುದೇ ಯಕ್ಷ ಪ್ರಶ್ನೆ.
Health Care: ಹೃದಯದ ಕಾಯಿಲೆ ಇದ್ದರೆ ತಣ್ಣೀರಿನ ಸ್ನಾನ ಒಳ್ಳೆಯದೇ..? ಇಲ್ಲಿದೆ ನೋಡಿ ಮಾಹಿತಿ
ಬಳ್ಳಾರಿಯ ಐವರು ಬಾಣಂತಿಯರ ಸಾವಿನ ಹಿಂದೆ ಮೆಡಿಕಲ್ ಮಾಫಿಯಾ ಇರುವುದು ಬಯಲಾದ ಬಳಿಕ ಈ ಹಿಂದೆಯೂ ಸಂಭವಿಸಿದ ಬಾಣಂತಿಯರ ಸಾವಿನ ಹಿಂದಿನ ಸಂಗತಿಯ ಅಸಲಿಯನ್ನು ಏನು ಎನ್ನುವ ಪ್ರಶ್ನೆಗಳು ಕೂಡ ಎದ್ದಿವೆ. ಇಂತಹ ಸಂಗತಿಯ ನಡುವೆ ತಾಯಿಯಂದಿರ ಮರಣ ಪ್ರಮಾಣಕ್ಕಿಂತ ಕಳೆದ ಮೂರು ವರ್ಷಗಳಲ್ಲಿ ಶಿಶುಗಳ ಮರಣ ಪ್ರಮಾಣ ಇದರ ನಾಲ್ಕು ಪಟ್ಟು ಹೆಚ್ಚಾಗಿರುವುದು ರಾಜ್ಯವನ್ನು ಆತಂಕಕ್ಕೆ ದೂಡಿದೆ.
೩೩,೭೧೫ ಶಿಶುಗಳ ಸಾವು: ಕಳೆದ ೨೦೨೧ ರಿಂದ ಅಕ್ಟೋಬರ್ ೨೦೨೪ರ ಅಂತ್ಯದವರೆಗೆ ಒಟ್ಟು ೩೩,೭೧೫ ಶಿಶುಗಳು ಸಾವಿಗೀಡಾಗಿವೆ. ಇದರಲ್ಲಿ ಹುಟ್ಟಿದ ಒಂದು ತಿಂಗಳ ಅವಧಿಯಲ್ಲಿ ೧೬೪೯೦ ನವಜಾತ ಶಿಶುಗಳು ಮರಣ ಹೊಂದಿದ್ದರೆ, ೧-೫ ತಿಂಗಳ ಅವಧಿಯಲ್ಲಿ ೧೭,೨೨೫ ಶಿಶುಗಳು ಸಾವಿಗಿಡಾಗಿವೆ. ಇನ್ನು ೨೧,೧೩೨ ಕಂದಮ್ಮಗಳು ಜನ್ಮ ಪಡೆಯುವ ಮುನ್ನವೇ(ಗರ್ಭದಲ್ಲೇ) ಮರಣದ ಪಾಶಕ್ಕೆ ಒಳಗಾಗಿವೆ.
ಸರಕಾರ ಆರೋಗ್ಯ ಇಲಾಖೆಗಾಗಿ ಸಾವಿರಾರು ಕೋಟಿ ನೀಡುತ್ತಿದೆ. ಹೈಟೆಕ್ ಯಂತ್ರಗಳನ್ನು ಪೂರೈಕೆ ಮಾಡುವ ಮೂಲಕ ತಾಯಿ ಗರ್ಭಾವಸ್ಥೆಯಲ್ಲಿಯೇ ಮಗುವಿನ ಬೆಳವಣಿಗೆ, ಆರೋಗ್ಯದ ಪರಿಶೀಲನೆ, ಚಲನ-ವಲನ ಎಲ್ಲವನ್ನೂ ನಿಗಾ ವಹಿಸಿ ಪರಿಶೀಲಿಸುತ್ತದೆ. ಮಾಸಿಕವಾರು ತಾಯಿ-ಶಿಶು ಮರಣ ಪ್ರಮಾಣ ತಡೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಹಲವು ಯೋಜನೆ ಪರಿಣಾಮಕಾರಿ ಅನುಷ್ಠಾನವಾಗುತ್ತಿರುವಾಗಲೇ ಸಂಭವಿಸುತ್ತಿರುವ ಈ ಪ್ರಮಾಣ ಸಾವಿನ ಸಂಖ್ಯೆ ನಾಗರೀಕ ಸಮಾಜವನ್ನು ಬೆಚ್ಚಿಬೀಳುಸುತ್ತಿದೆ.
……….
ವವಜಾತ ಶಿಶು ಮರಣ ಪ್ರಮಾಣ(೦-೧ತಿಂಗಳು)
ವರ್ಷ ಶಿಶು ಮರಣ
೨೦೨೧-೨೨ ೫೦೪೦
೨೦೨೨-೨೩ ೬೩೩೦
೨೦೨೩-೨೪(ಅಕ್ಟೋಬರ್) ೫೧೨೦
………….
ಶಿಶು ಮರಣ ಪ್ರಮಾಣ(೧-೫ತಿಂಗಳು)
ವರ್ಷ ಶಿಶು ಮರಣ
೨೦೨೧-೨೨ ೫೨೦೯
೨೦೨೨-೨೩ ೬೬೩೫
೨೦೨೩-೨೪(ಅಕ್ಟೋಬರ್) ೫೩೮೧
……….
ಜನನಕ್ಕೂ ಮುನ್ನ ಸಾವನಪ್ಪಿದ ಶಿಶುಗಳು
ವರ್ಷ ಸಾವು
೨೦೨೧-೨೨ ೫೬೭೨
೨೦೨೨-೨೩ ೭೩೭೨
೨೦೨೩-೨೪(ಅಕ್ಟೋಬರ್)೮೦೮೮